×
Ad

ಮುಂದಿನ ಪೀಳಿಗೆಗಾಗಿ ಗಿಡ ಬೆಳೆಸಿ: ಅರಣ್ಯಾಧಿಕಾರಿ ಅಝೀಝ್

Update: 2016-08-11 22:42 IST

ಚಿಕ್ಕಮಗಳೂರು, ಆ.11: ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ಮುಂದಾಗಬೇಕು ಎಂದು ವಲಯ ಅರಣ್ಯಾಧಿಕಾರಿ ಅಬ್ದುಲ್ ಅಝೀಝ್ ಮನವಿ ಮಾಡಿದರು.

 ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ತಾಲೂಕಿನ ಬೀಳೇಕಲ್ಲಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವನ ದುರಾಸೆಯಿಂದಾಗಿ ದೇಶದಲ್ಲಿಂದು ದಟ್ಟ ಅರಣ್ಯಗಳು ಕಡಿಮೆಯಾಗುತ್ತಿದ್ದು, ಎಲ್ಲೆಡೆ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದರಿಂದಾಗಿ ಹವಾಮಾನ ವೈಪ ರೀತ್ಯ ಎದುರಾಗಿದೆ. ಕಂಡು ಕೇಳರಿಯದ ರೋಗರುಜಿನಗಳು ಸಮಾಜವನ್ನು ಕಾಡುತ್ತಿವೆ ಎಂದು ವಿಷಾದಿಸಿದರು.

ಸಾರ್ವಜನಿಕರು ಈಗಲಾದರೂ ಎಚ್ಚೆತ್ತು ಸ್ವಯಂ ಪ್ರೇರಣೆಯಿಂದ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮಕ್ಕೆ ಮುನ್ನ ಪರಿಸರ ಸಂರಕ್ಷಣೆ ಕುರಿತ ಜಾಗೃತಿ ಜಾಥಾ ಗ್ರಾಮದಲ್ಲಿ ನಡೆಯಿತು. ಶಾಲೆಯ ಆವರಣವನ್ನು ಸಾಮೂಹಿಕವಾಗಿ ಸ್ವಚ್ಛಗೊಳಿಸುವುದರ ಜೊತೆಗೆ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬೇಬಿ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಗಿಡ-ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವುದು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ ಎಂದರು.

ಮುಖ್ಯಶಿಕ್ಷಕಿ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ರಾಧಮ್ಮ, ಯೋಜನೆಯ ಕೃಷಿ ಅಧಿಕಾರಿ ಶಿಶಧರ್, ಸದಸ್ಯರಾದ ಪುಟ್ಟೇಗೌಡ, ಬಾನುಪ್ರಕಾಶ್, ಶಶಿಕಲಾ, ತಿಲಕ್‌ರಾಜ್, ಮೋಹನ್‌ರಾಜ್, ಶಿಕ್ಷಕಿ ಸೋನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News