ಪರಿಹಾರಕ್ಕೆ ಕ್ರಮಕೈಗೊಳ್ಳುವರೇ ಕಂದಾಯ ಸಚಿವರು?
ಶಿವಮೊಗ್ಗ, ಆ.11: ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ‘ಉಪಗ್ರಹ ಆಧಾರಿತ ನಗರ ಆಸ್ತಿ ಮಾಲಕತ್ವದ ಯೋಜನೆ’ (ಯುಪಿಒಆರ್) ಯನ್ನು ಕಂದಾಯ ಇಲಾಖೆ ಅನುಷ್ಠಾನಗೊಳಿಸಿದೆ. ಇದೀಗ ಶಿವಮೊಗ್ಗ ನಗರದಲ್ಲಿ ಯಾವುದೇ ಸ್ಥಿರಾಸ್ತಿಯ ನೋಂದಣೆ-ಪರಬಾರೆ ಮಾಡಲು ಪ್ರಾಪರ್ಟಿ ರೆಕಾರ್ಡ್ (ಪಿ.ಆರ್)ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಇದಕ್ಕಾಗಿಯೇ ಶಿವಮೊಗ್ಗ ನಗರದ ಉಪ ವಿಭಾಗಾಧಿಕಾರಿ ಕಚೇರಿ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಸುಸಜ್ಜಿತ ಯುಪಿಒಆರ್ ಕಚೇರಿಯನ್ನೂ ತೆರೆಯಲಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಈ ಕಚೇರಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಸರ್ವೇ ಇಲಾಖೆ ಈ ಕಚೇರಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಖಾಸಗಿ ಸಂಸ್ಥೆಯ ಹಲವು ಸಿಬ್ಬಂದಿ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಕಾರ್ಯಗಳು ಸುಲಲಿತವಾಗಿ ನಡೆಯುತ್ತಿಲ್ಲ. ವಿಳಂಬಗತಿಯಲ್ಲಿ ಸಾಗುತ್ತಿದೆ. ಪಿ. ಆರ್. ಕಾರ್ಡ್ ಮಾಡಿಸಲು ನಾಗರಿಕರು ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ಇದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಅಲ್ಲದೆ, ಕೆಲ ಪಿ.ಆರ್. ಕಾರ್ಡ್‌ಗಳಲ್ಲಿ ಸ್ಥಿರಾಸ್ತಿಗೆ ಸಂಬಂಧಿಸಿದ ಮಾಹಿತಿಗಳಲ್ಲಿ ಸಾಕಷ್ಟು ಲೋಪದೋಷ ಕಂಡುಬರುತ್ತಿವೆ. ಇದರಿಂದ ಸ್ಥಿರಾಸ್ತಿ ಮಾಲಕರು ನಾನಾ ರೀತಿಯ ತೊಂದರೆ ಅನುಭವಿಸುವಂತಾಗಿದೆ. ಜೊತೆಗೆ ತಿದ್ದುಪಡಿ ಮಾಡಿಸಲು ಇನ್ನಿಲ್ಲದ ಹರಸಾಹಸ ನಡೆಸುವಂತಾಗಿದೆ. ಜನತೆ ಸಮರ್ಪಕ ಮಾಹಿತಿಯ ಕೊರತೆಯಿಂದ ಪರದಾಡುವಂತಾಗಿದೆ. ಈ ಹಿಂದೆ ಅರ್ಜಿದಾರರಿಗೆ ಕಾಲಮಿತಿಯಲ್ಲಿ ಪಿ.ಆರ್. ಕಾರ್ಡ್ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಇದೀಗ ಇದು ಸಾಧ್ಯವಾಗುತ್ತಿಲ್ಲ. ವಿಳಂಬಗತಿಯಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ನಾಲ್ಕು ದಿನಗಳ ಹಿಂದೆ ಕಾಗದ ಪತ್ರಗಳ ಕೊರತೆಯಿಂದ ಅಂತಿಮ ಪಿ.ಆರ್. ಕಾರ್ಡ್ ವಿತರಿಸುವುದನ್ನೂ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಸ್ಥಿರಾಸ್ತಿ ಮಾಲಕರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿತ್ತು ಎಂದು ಸ್ಥಿರಾಸ್ತಿ ಮಾಲಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸ್ಥಿರಾಸ್ತಿಯ ಖಾತೆ ಪತ್ರದಲ್ಲಿರುವ ವಿಸ್ತೀರ್ಣದ ಮಾಹಿತಿ ಪಿ.ಆರ್. ಕಾರ್ಡ್‌ನಲ್ಲಿ ನಮೂದಾಗುತ್ತಿಲ್ಲ. ಕೆಲವೊಮ್ಮೆ ಮಾಲಕರ ಹೆಸರೇ ತಪ್ಪಾಗಿ ಮುದ್ರಿಸಲಾಗಿರುತ್ತದೆ. ಇದರಿಂದ ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯ, ತಗಾದೆಗಳು ಹೆಚ್ಚಾಗುತ್ತಿವೆ. ಈ ರೀತಿಯ ಲೋಪದೋಷಗಳಿಗೆ ಕಚೇರಿಯ ಸಿಬ್ಬಂದಿ ಸಮರ್ಪಕ ಸ್ಪಷ್ಟನೆ ನೀಡುತ್ತಿಲ್ಲ ಎಂದು ನಾಗರಿಕರೊಬ್ಬರು ದೂರಿದ್ದಾರೆ.