ಇರಾನಿ ಗ್ಯಾಂಗ್‌ನ ಆರು ಸರಗಳ್ಳರಿಗೆ ಜೀವಾವಧಿ ಶಿಕ್ಷೆ
ಬೆಳಗಾವಿ, ಆ.12: ಸಿನಿಮೀಯ ರೀತಿಯಲ್ಲಿ ಮಹಿಳೆಯರ ಮೇಲಿನ ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿದ್ದ ಇರಾನಿ ಗ್ಯಾಂಗ್‌ನ ಆರು ಜನ ಸದಸ್ಯರಿಗೆ ಬೆಳಗಾವಿ 1ನೆ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಹಾರಾಷ್ಟ್ರದಿಂದ ಬಂದಿದ್ದ ಈ ಆರೋಪಿಗಳು 2015ರಲ್ಲಿ ಸಿನಿಮೀಯ ರೀತಿಯಲ್ಲಿ ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿದ್ದರಿಂದ ಮಹಮದ್ ಇರಾನಿ, ಶಾರುಖ್ ಶೇಖ್, ಸಲೀಂಶೇಖ್, ಅಬ್ಬಾಸ್ ಇರಾನಿ, ಹೈದರ್ ಇರಾನಿ, ರಫೀಕ್ ಶೇಕ್ ಮೇಲೆ ಒಟ್ಟು 33 ಪ್ರಕರಣಗಳು ದಾಖಲಾಗಿದ್ದವು. ಈ ಆರೋಪಿಗಳನ್ನು ಬಂಧಿಸಲು ಬೆಳಗಾವಿ ಎಸ್‌ಪಿ ಅವರು ವಿಶೇಷ ಪೊಲೀಸ್ ತಂಡವನ್ನು ರಚಿಸಿ ಒಂದು ತಿಂಗಳಲ್ಲಿ ಇವರನ್ನು ಬಂಧಿಸಿ ಜೈಲಿಗೆ ಹಾಕಿದ್ದರು.
ಶುಕ್ರವಾರ ಸರಕಾರಿ ಅಭಿಯೋಜಕ ಮಕಾಂದರ ವಾದಿಸಿ, ಈ ಆರು ಜನ ಆರೋಪಿಗಳು ಇರಾನಿ ಗ್ಯಾಂಗ್‌ನ ಸದಸ್ಯರುಗಳಾಗಿದ್ದು, ಇವರು ಮಹಿಳೆಯರ ಮೇಲಿನ ಚಿನ್ನದ ಸರಗಳನ್ನು ಕಸಿಯುತ್ತಿದ್ದರು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಅವರಿದ್ದ ನ್ಯಾಯಪೀಠವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು.