ಮಹಿಳೆಯರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ: ರೇಖಾ

Update: 2016-08-12 16:25 GMT

ತರೀಕೆರೆ,ಆ.12: ವಿಶ್ವದಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಣೆ ಎರಡನೆ ಗಂಭೀರ ಅಪರಾಧವಾಗಿದ್ದು ಭಾರತ ದೇಶವು ಈ ಕೃತ್ಯದಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಶಿವಮೊಗ್ಗ ಬಾಲ ನ್ಯಾಯ ಮಂಡಲಿ ಸದಸ್ಯೆ ರೇಖಾ ಅಭಿಪ್ರಾಯಪಟ್ಟರು.

 ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇತ್ತೀಚೆಗೆ ಏರ್ಪಡಿಸಿದ್ದ ಟಿ.ಸಿ.ಬಸಪ್ಪನವರ ದತ್ತಿ ಉಪನ್ಯಾಸ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಸಮಾಜ ನಿರ್ಮಾಣದಲ್ಲಿ ಮತ್ತು ಸೇವೆಯಲ್ಲಿ ಮಹಿಳೆಯರ ಪಾತ್ರ ವಿಷಯ ಕುರಿತು ಮಾತನಾಡಿದರು.

ಮಹಿಳೆ ಗೃಹ ಚಟುವಟಿಕೆ, ಕುಟುಂಬ ನಿರ್ವಹಣೆ ಸೇರಿದಂತೆ ಸಮಾಜಕ್ಕಾಗಿ ಅನೇಕ ಕೊಡುಗೆ ನೀಡಿದ್ದಾಳೆ. ಸಮಾಜ ಅವಳ ಕೊಡುಗೆ ಗುರುತಿಸುವಲ್ಲಿ ವಿಫಲವಾಗಿದೆ. ಮಹಿಳೆ ಕೀಳರಿಮೆ ಬಿಟ್ಟು ಸಮಾಜದಲ್ಲಿ ಗುರುತಿಸಲು ಪ್ರಯತ್ನಿಸಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಇಂದಿಗೂ ಮಹಿಳೆಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಮಾಜಿ ಪುರಸಭೆ ಅಧ್ಯಕ್ಷ ಭವರ್‌ಲಾಲ್ ಮಾತನಾಡಿ, ಮಾಜಿ ಶಾಸಕರಾಗಿದ್ದ ಟಿ.ಸಿ.ಬಸಪ್ಪನವರ ಬದುಕು ಇಂದಿನ ರಾಜಕೀಯಕ್ಕೆ ಅಗತ್ಯವಾಗಿದೆ. ಸರಳತೆಗೆ ಹೆಸರಾಗಿದ್ದ ಟಿ.ಸಿ.ಬಸಪ್ಪನವರು ತಾಲೂಕಿನ ರಾಜಕೀಯಕ್ಕೆ ಹೊಸ ಭಾಷ್ಯವನ್ನು ಬರೆದರು ಎಂದರು

ತಾಲೂಕು ಕಸಾಪ ಅಧ್ಯಕ್ಷ ದಾದಾಪೀರ್ ಮಾತನಾಡಿ ಅಗಲಿದವರ ಹೆಸರಿನಲ್ಲಿ ಶೋಕಿಸುವ ಬದಲು ಅವರ ನೆನಪಲ್ಲಿ ಸಾಮಾಜಿಕ ಕಾರ್ಯಕ್ರಮಗಳು ಸ್ವಾಗಾತಾರ್ಹ ಎಂದರು.

 ಕಾರ್ಯಕ್ರಮವನ್ನು ದತ್ತಿ ದಾನಿ ಶ್ಯಾಮಲಾ ಮಂಜುನಾಥ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗೀತ ಗಾಯನ ನಡೆಸಿದ ಆಕಾಶವಾಣಿ ಕಲಾವಿದರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಸಾಪ ಪ್ರತಿನಿಧಿ ಬಿ.ಎಸ್.ಭಗವಾನ್, ಪತ್ರಕರ್ತ ಅನಂತನಾಡಿಗ್, ಕಸಾಪ ಹೋಬಳಿ ಅಧ್ಯಕ್ಷ ತ.ಮ.ದೇವಾನಂದ್, ಮುಖಂಡರಾದ ಟಿ.ಜಿ.ಸದಾನಂದ್, ನವೀನ್ ಪೆನ್ನಯ್ಯ, ಉಪನ್ಯಾಸಕಿ ಪೂರ್ಣಿಮಾ ವಿ ರೆಡ್ಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News