×
Ad

‘ಜಿಲ್ಲೆಯ ಸಮಸ್ಯೆಗಳಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ

Update: 2016-08-12 21:56 IST

ಮಡಿಕೇರಿ, ಆ.12: ಕೊಡಗಿನ ಭೂಮಿ ಸಮಸ್ಯೆ ಸೇರಿದಂತೆ ಇತರ ಎಲ್ಲ್ಲ ಸಮಸ್ಯೆಗಳಿಗೆ ತಮ್ಮ ಕಾರ್ಯವ್ಯಾಪ್ತಿಗೆ ಅನುಗುಣವಾಗಿ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಭರವಸೆ ನೀಡಿದ್ದಾರೆ.

ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಪತ್ರಿಕಾಭವನದ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಬೆರೆಸದೆ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು. ವೀಣಾ ಅಚ್ಚಯ್ಯ ಮಾತನಾಡಿ, ಕೊಡಗಿನ ಬಾಣೆ ಸಮಸ್ಯೆ ಇತರೆ ಜಿಲ್ಲೆಗಳ ಸಮಸ್ಯೆಗಳಿಗಿಂತ ಭಿನ್ನವಾಗಿದೆ. ಈ ಬಗ್ಗೆ ಮನವರಿಕೆ ಮಾಡಿಕೊಡಲು ಸೆಪ್ಟಂಬರ್‌ನಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪಅವರನ್ನು ಜಿಲ್ಲೆಗೆ ಆಹ್ವಾನಿಸಿ, ಕಂದಾಯ ಅಧಿಕಾರಿಗಳ ಸಭೆ ನಡೆಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದೆಂದರು.

 ಕಾಡಾನೆ ಹಾವಳಿ ವಿರುದ್ಧ ಕ್ರಮಕ್ಕೆ ಸಿಎಂಗೆ ಮೊರೆ: ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗಿದ್ದು, ಇದರ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅರಣ್ಯ ಸಚಿವ ರಮಾನಾಥ್ ರೈ ಅವರೊಂದಿಗೆ ಚರ್ಚಿಸಲಾಗುವುದು. ಅಲ್ಲದೆ ಮುಖ್ಯಮಂತ್ರಿಯವರ ಬಳಿಗೂ ಜಿಲ್ಲೆಯ ಎಲ್ಲ್ಲ ಜನಪ್ರತಿನಿಧಿಗಳ ನಿಯೋಗ ತೆರಳುವುದಾಗಿ ವೀಣಾ ಅಚ್ಚಯ್ಯ ಭರವಸೆ ನೀಡಿದರು.

ಸುನೀಲ್ ಸುಬ್ರಮಣಿ ಮಾತನಾಡಿ, ಜಿಲ್ಲೆಯ ಕಾಡಾನೆ ಸಮಸ್ಯೆ ಬಗೆಹರಿಸಲು ಈ ಹಿಂದೆಯೇ ಅರಣ್ಯ ಸಚಿವ ರಮಾನಾಥ ರೈ ಅವರು ಸಭೆಯನ್ನು ನಡೆಸಿದ್ದಾರೆ. ವಿದೇಶಗಳಲ್ಲಿ ಕಾಡಾನೆಗಳ ನಿಯಂತ್ರಣ ಹೇಗೆ ನಡೆಯುತ್ತಿದೆ ಎನ್ನುವ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕೆೇಂದ್ರ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಯೋಜನೆ ಅನಗತ್ಯ ವಿಳಂಬವಾಗುತ್ತಿರುವುದು ಮತ್ತು ಕೆಲವು ನಗರಸಭಾ ಸದಸ್ಯರಿಂದಲೇ ಅಡ್ಡಿಗಳು ಬರುತ್ತಿರುವ ಕುರಿತು ಮಾತನಾಡಿದ ಸುನೀಲ್ ಸುಬ್ರಮಣಿ, ಶೀಘ್ರ ಶಾಸಕರು ಹಾಗೂ ನಗರಸಭಾ ಸದಸ್ಯರೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲೆ ಅಂತಿಮ ನಿರ್ಧಾರಕ್ಕೆ ಬರಲಾಗುವುದೆಂದರು.

ನಗರಸಭೆೆಯಲ್ಲಿ ಸಾಮರಸ್ಯವಿಲ್ಲ:  ಬಸ್ ನಿಲ್ದಾಣ ನಿರ್ಮಾಣ ವಿಳಂಬವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ವೀಣಾ ಅಚ್ಚಯ್ಯ, ಹಿಂದಿನ ಬಿಜೆಪಿ ಮತ್ತು ಈಗಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲೋಪಗಳಾಗಿದೆ ಎಂದು ಒಪ್ಪಿಕೊಂಡರು. ಬಸ್ ನಿಲ್ದಾಣ ನಿರ್ಮಾಣಕ್ಕೆ ಯಾವುದೇ ಹಣದ ಕೊರತೆ ಇಲ್ಲವೆಂದು ಸ್ಪಷ್ಟಪಡಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸಾಮರಸ್ಯದ ಅಗತ್ಯವಿದೆ ಎಂದು ಸುನೀಲ್ ಸುಬ್ರಮಣಿ ಇದೇ ಸಂದರ್ಭ ಅಭಿಪ್ರಾಯಪಟ್ಟರು.

ತಾಲೂಕು ಕಚೇರಿಗೆ ಭೆೇಟಿ ನೀಡುತ್ತೇವೆ:

ಮಡಿಕೇರಿಯ ತಾಲೂಕು ಕಚೇರಿಯಲ್ಲಿ ಆದಾಯ ದೃಢೀಕರಣ ಪತ್ರ ಹಾಗೂ ಜಾತಿ ದೃಢೀಕರಣ ಪತ್ರ ಸೇರಿದಂತೆ ಇತರ ದಾಖಲೆಗಳು ಸಕಾಲದಲ್ಲಿ ದೊರೆಯದೆ ಇರುವ ಬಗ್ಗೆ ಮಾತನಾಡಿದ ಸುನೀಲ್ ಸುಬ್ರಮಣಿ, ನಾವಿಬ್ಬರು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಸ್ಥಳೀಯ ಅಧಿಕಾರಿಗಳು ಸ್ಥಳೀಯ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಸಕಾಲದಲ್ಲಿ ಕಡತಗಳನ್ನು ವಿಲೇವಾರಿ ಮಾಡಿಕೊಡುವ ಮೂಲಕ ಮಾನವೀಯತೆ ಮತ್ತು ಸೌಜನ್ಯವನ್ನು ತೋರಬೇಕೆಂದು ಅವರು ಇದೇ ಸಂದಭರ್ ತಿಳಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಪ್ರ. ಕಾರ್ಯದರ್ಶಿ ಬಿ.ಸಿ. ದಿನೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News