×
Ad

ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ಚಂದ್ರಪ್ಪ

Update: 2016-08-12 21:57 IST

ಕಡೂರು, ಆ.12: ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ವೃದ್ಧಿಪಡಿಸುವ ಶಾಲಾ ಕ್ರೀಡಾಕೂಟಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ವೈ.ಟಿ. ಚಂದ್ರಪ್ಪತಿಳಿಸಿದರು.

 ಅವರು ಶುಕ್ರವಾರ ತಾಲೂಕಿನ ಸರಸ್ಪತಿಪುರ ಶನೇಶ್ವರ ಸಮುದಾಯಭವನದಲ್ಲಿ ಏರ್ಪಡಿಸಿದ್ದ ಆರ್.ಜಿ. ಕೊಪ್ಪಲು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಮಕ್ಕಳು ಮೊಬೈಲ್,ಟಿವಿಗಳ ದಾಸರಾಗುತ್ತಿರುವುದು ವಿಷಾದನೀಯ. ಪೋಷಕರು ಮತ್ತು ಶಿಕ್ಷಕರು ಕ್ರೀಡೆಗಳಿಗೆ ಹೆಚ್ಚು ಒತ್ತನ್ನು ನೀಡಬೇಕು, ಸರಕಾರವು ಕ್ರೀಡೆಗಳ ಅಭಿವೃದ್ಧ್ದಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಸರಕಾರ ಮತ್ತು ಶಿಕ್ಷಣ ಇಲಾಖೆಯ ನಿಯಮಗಳಿಂದ ದೈಹಿಕ ಶಿಕ್ಷಕರ ಕೊರತೆ ಎದುರಾಗಲಿದೆ, ಇದರಿಂದ ಮುಂದಿನ ದಿನಗಳಲ್ಲಿ ಕ್ರೀಡಾಕೂಟಗಳು ಕನಸಿನ ಮಾತಾಗಲಿದೆ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಎಸ್. ಬಸವರಾಜು ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ 126ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದ ಕ್ರೀಡಾಪಟುಗಳು ಒಂದು ಪದಕವನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ ಏಕೆ? ಎಂದರು.

  ಒಲಿಂಪಿಕ್ಸ್‌ಗೆ ಭಾರತದ 160 ಕ್ರೀಡಾಪಟುಗಳು ತೆರಳಿದ್ದು, ಇದಕ್ಕೆ 120 ಕೋಟಿ ರೂ. ವೆಚ್ಚವಾಗಿದೆ, ಆದರೂ ಒಂದು ಪದಕ ಗೆಲ್ಲಲು ಸಾಧ್ಯವಾಗಿಲ್ಲ, ಇತರೆ ಸಣ್ಣ-ಸಣ್ಣ ದೇಶಗಳು ಕ್ರೀಡೆಗೆ ಹೆಚ್ಚು ಮಹತ್ವ ನೀಡುತ್ತಿರುವ ಕಾರಣ ಪದಕಗಳ ಸರಮಾಲೆಯನ್ನೇ ಗೆಲ್ಲುತ್ತಿದ್ದಾರೆ, ಇಂತಹ ಪ್ರೋತ್ಸಾಹ ನಮ್ಮ ಕ್ರೀಡಾಪಟುಗಳಿಗೂ ಅಗತ್ಯವಾಗಿದೆ ಎಂದರು.

ಕ್ರೀಡಾಕೂಟವನ್ನು ಗ್ರಾಪಂ ಸದಸ್ಯ ರೇವಣ್ಣ ಉದ್ಘಾಟಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಸರಸ್ಪತಿಪುರ ಗ್ರಾಪಂ ಅಧ್ಯಕ್ಷೆ ವಸಂತಮ್ಮ ತೀರ್ಥಾಚಾರ್ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷಆನಂದಮೂರ್ತಿ, ಮುಖಂಡ ಶ್ರೀನಿವಾಸ್ ದೈಹಿಕ ಶಿಕ್ಷಕ ಪರಿವೀಕ್ಷಕ ಜಯಣ್ಣ, ಗ್ರಾಪಂ ಸದಸ್ಯ ಸಂತೋಷ್ ಮಾತನಾಡಿದರು.

 ವೇದಿಕೆಯಲ್ಲಿ ಸಂಘದ ನಿರ್ದೇಶಕ ಭೈರೇಗೌಡ, ಉಮಾಪತಿ, ತಿಪ್ಪೇಶ್, ಶ್ರೀನಿವಾಸ್, ಮುಖ್ಯ ಶಿಕ್ಷಕಿ ಮಂಜಮ್ಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News