ಉ.ಕ. ಪ್ರವಾಸೋದ್ಯಮ ಅಭಿವೃದ್ಧಿಗೆ 116 ಕೋಟಿ ರೂ. ಬಿಡುಗಡೆ
ಕಾರವಾರ, ಆ.12: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ 190 ಕೋಟಿ ರೂ. ಮಂಜೂರಾತಿ ನೀಡಲಾಗಿದ್ದು, ಈವರೆಗೆ 116 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದರು.
ಅವರು ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒಟ್ಟು 134 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದು ವರೆಗೆ 57 ಕಾಮಗಾರಿಗಳು ಪೂರ್ಣಗೊಂಡಿವೆ. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಕೆಆರ್‌ಐಡಿಎಲ್ ಮತ್ತು ನಿರ್ಮಿತ ಕೇಂದ್ರಗಳ ಮೂಲಕ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಮೆಗಾ ಕೋಸ್ಟಲ್ ವೃತ್ತ ಯೋಜನೆಯಡಿ ಮುರ್ಡೇಶ್ವರ ಬಾಲಿ ಬೀಚ್, ಅಪ್ಸರ ಕೊಂಡ ಬೀಚ್, ಕಾಸರಕೋಡು ಬೀಚ್, ಪಾವಿನಕುರ್ವೆ ಬೀಚ್, ಓಂ ಬೀಚ್, ಕುಡ್ಲೆ ಬೀಚ್, ಗೋಕರ್ಣ ಬೀಚ್, ಕುಮಟಾ ಬೀಚ್, ಬೇಲೆಕೇರಿ ಬೀಚ್, ಟಾಗೋರ್ ಬೀಚ್, ಮಾಜಾಳಿ ಬೀಚ್ ಮತ್ತು ತೀಳಮಾತಿ ಬೀಚ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜೀವ ರಕ್ಷಕರ ನಿರೀಕ್ಷಣಾ ಗೋಪುರ, ಘನತ್ಯಾಜ್ಯ ನಿರ್ವಹಣೆ, ಹೈಮಾಸ್ಟ್ ದೀಪ ಅಳವಡಿಕೆ, ಕೂಡು ರಸ್ತೆ ನಿರ್ಮಾಣ, ಪ್ಯಾರಾಗೋಲ, ರೆಸ್ಕ್ಯೂ ಬೋಟ್‌ಗಳ ಖರೀದಿ, ಪಾರ್ಕಿಂಗ್ ವ್ಯವಸ್ಥೆ ಇತ್ಯಾದಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾರವಾರದ ಠಾಗೋರ್ ಬೀಚ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿಧಾನ ಗತಿಯಲ್ಲಿ ನಡೆಯುತ್ತಿದ್ದು, ಅದನ್ನು ಚುರುಕು ಗೊಳಿಸುವಂತೆ ಅವರು ಸೂಚಿಸಿದರು.
ಜಿಲ್ಲೆಯ ವಿವಿಧ ಜಲಪಾತಗಳನ್ನು ಸಂಪರ್ಕಿಸುವ ರಸ್ತೆಗಳ ಸುಧಾರಣೆ, ವೀಕ್ಷಣಾ ಗೋಪುರಗಳ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆ ಇತ್ಯಾದಿ ಮೂಲಸೌಲಭ್ಯಗಳ ಅಭಿವೃದ್ಧಿ, ಇಕೋ ಬೀಚ್ ಮತ್ತು ನೇಚರ್ ಕ್ಯಾಂಪ್ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಇದೇ ವೇಳೆ ನುಡಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕ ಸತೀಶ್ ಸೈಲ್, ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.
36 ಕೋಟಿ ರೂ. ವೆಚ್ಚದಲ್ಲಿ 7 ಮಿನಿ ವಿಧಾನಸೌಧ ನಿರ್ಮಾಣ ಕಾರವಾರ: ಜಿಲ್ಲೆಯ ಏಳು ತಾಲೂಕುಗಳಲ್ಲಿ 36 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಮಾತನಾಡುತ್ತಿದ್ದರು.
ಮುಂದಿನ ಒಂದು ವರ್ಷದ ಒಳಗಾಗಿ ಎಲ್ಲಾ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಕಾರವಾರ, ಸಿದ್ದಾಪುರ, ಜೊಯಿಡಾ ಮತ್ತು ಹೊನ್ನಾವರಗಳಲ್ಲಿ ತಲಾ 5 ಕೋಟಿ ರೂ. ವೆಚ್ಚದ ಮಿನಿವಿಧಾನ ಸೌಧಗಳು ನಿರ್ಮಾಣವಾಗಲಿವೆೆ. ಭಟ್ಕಳ ತಾಲೂಕಿನಲ್ಲಿ 10 ಕೋಟಿ ರೂ. ಹಾಗೂ ಯಲ್ಲಾಪುರ, ಹಳಿಯಾಳಗಳಲ್ಲಿ ತಲಾ 3 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.
ಈಗಾಗಲೇ ಬಹುತೇಕ ಮಿನಿ ವಿಧಾನ ಸೌಧಗಳ ಕಾಮಗಾರಿಗಳು ಆರಂಭವಾಗಿವೆ. ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅಲ್ಲದೆ, ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು ಕಾಮಗಾರಿಗಳ ತಪಾಸಣೆ ನಡೆಸುತ್ತಿರಬೇಕು ಎಂದು ಸೂಚಿಸಿದರು. ಕಾರವಾರದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕಾಗಿ ಅಂದಾಜು ಪತ್ರಿಕೆ ಹಾಗೂ ನಕ್ಷೆಗಳನ್ನು ಅನುಮೋದನೆಗಾಗಿ ಸರಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಅನುಮೋದನೆ ದೊರೆತ ಬಳಿಕ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಎಲ್ಲಾ ತಾಲೂಕುಗಳಲ್ಲಿ ಲಭ್ಯವಿರುವ ಕಂದಾಯ ಭೂಮಿಗಳನ್ನು ಗುರುತಿಸಿ ಅದರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.