×
Ad

ಕೊರತೆ ಭತ್ತ ನಾಟಿಯ ಮೇಲೆ ವ್ಯತಿರಿಕ್ತ ಪರಿಣಾಮ

Update: 2016-08-12 22:01 IST

   ಶಿವಮೊಗ್ಗ, ಆ. 12: ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯ ತೀವ್ರ ಕೊರತೆ ಮುಂದುವರಿದಿದೆ. ಕಳೆದ ಕೆಲ ದಿನಗಳಿಂದ ಬಿಸಿಲು ಬೀಳಲಾರಂಭಿಸಿದ್ದು, ಧಾರಾಕಾರ ವರ್ಷಧಾರೆ ಕಣ್ಮರೆಯಾಗಿ ತುಂತುರು ಮಳೆಯಾಗುತ್ತಿದೆ. ಮಳೆಯ ಕಣ್ಣಾಮುಚ್ಚಾಲೆಯಾಟದ ನೇರ ಪರಿಣಾಮ ಭತ್ತ ಬೆಳೆಯುವ ಬೆಳೆಗಾರರ ಮೇಲೆ ಬಿದ್ದಿದೆ. ಕೆರೆಕಟ್ಟೆ-ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗದ ಪರಿಣಾಮ ಜಿಲ್ಲೆಯಾದ್ಯಂತ ಭತ್ತ ನಾಟಿ ಕಾರ್ಯ ವಿಳಂಬವಾಗುವಂತಾಗಿದೆ. ಇನ್ನೂ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಇನ್ನಷ್ಟೆ ಆರಂಭವಾಗಬೇಕಾಗಿದೆ. ಇಳಿಕೆ: ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆ ಅಂಕಿಅಂಶದ ಮಾಹಿತಿಯ ಪ್ರಕಾರ, ಶುಕ್ರವಾರ ಬೆಳಗ್ಗೆ 8:30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಮಳೆಯ ಸರಾಸರಿ ಪ್ರಮಾಣ 5.57 ಮಿಲಿ ಮೀಟರ್ (ಮಿ.ಮೀ.) ಯಾಗಿದೆ. ಶಿವಮೊಗ್ಗದಲ್ಲಿ 2.60 ಮಿ.ಮೀ.,ತೀರ್ಥಹಳ್ಳಿ 12.40 ಮಿ.ಮೀ., ಸಾಗರ 14 ಮಿ.ಮೀ., ಶಿಕಾರಿಪುರ 1 ಮಿ.ಮೀ., ಸೊರಬ 2.20 ಮಿ.ಮೀ. ಮತ್ತು ಹೊಸನಗರ ತಾಲೂಕಿನಲ್ಲಿ 6.80 ಮಿ.ಮೀ. ವರ್ಷಧಾರೆಯಾಗಿದೆ. ಉಳಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಹೊಸನಗರ ತಾಲೂಕಿನ ಮಾಣಿಯಲ್ಲಿ ಅತ್ಯಧಿಕ 107 ಮಿ.ಮೀ., ಹುಲಿಕಲ್ಲುವಿನಲ್ಲಿ 49 ಮಿ.ಮೀ., ಚಕ್ರಾದಲ್ಲಿ 37 ಮಿ.ಮೀ., ಸಾವೇಹಕ್ಲುವಿನಲ್ಲಿ 34 ಮಿ.ಮೀ. ವರ್ಷಧಾರೆಯಾಗಿದೆ. ಮಳೆಯ ಕೊರತೆಯಿಂದ ಬಹುತೇಕ ಜಿಲ್ಲೆಯ ಪ್ರಮುಖ ಜಲಾಶಯಗಳು, ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಇದರಿಂದ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತದ ನಾಟಿ ಕಾರ್ಯವು ವಿಳಂಬಗತಿಯಲ್ಲಿ ಸಾಗುವಂತಾಗಿದೆ. ಕೃಷಿ ಇಲಾಖೆ ಅಂದಾಜಿಸಿದ್ದ ಪ್ರಮಾಣದಲ್ಲಿ ಭತ್ತದ ನಾಟಿ ಕಾರ್ಯ ನಡೆಯುತ್ತಿಲ್ಲ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಶೇ. 31 ರಷ್ಟು ಮಳೆ ಕೊರತೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆಯ ಮಳೆಯಾಗಿಲ್ಲ. ಇದರಿಂದ ಭತ್ತದ ನಾಟಿ ಕಾರ್ಯ ವಿಳಂಬವಾಗಲು ಮುಖ್ಯ ಕಾರಣವಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಬಿತ್ತನೆ ಮಾಡಿರುವ ಬೆಳೆಗಳಿಗೂ ಹದ ಮಳೆಯ ಆವಶ್ಯಕತೆಯಿದೆ. ಆದರೆ ತುಂತುರು ಮಳೆಯಾಗುತ್ತಿರುವುದು ಹಾಗೂ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹಣೆಯಾಗದಿರುವುದು ಅನ್ನದಾತರ ಮೊಗದಲ್ಲಿ ಆತಂಕದ ಕರಿಛಾಯೆ ಆವರಿಸುವಂತೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News