‘ಮದ್ಯ ಸೇವನೆ ತ್ಯಜಿಸಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ’
ಭಟ್ಕಳ, ಆ.13: ಮದ್ಯ ಸೇವನೆ ಮಾಡುವವರು ಸಮಾಜಕ್ಕೆ ಬೇಡವಾದ ವ್ಯಕ್ತಿಗಳಾಗಿರುತ್ತಾರೆ. ಆದ್ದರಿಂದ ಮದ್ಯ ಸೇವನೆಯಿಂದ ಹೊರಬಂದು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಶಾಸಕ ಮಾಂಕಾಳ್ ವೈದ್ಯ ಹೇಳಿದರು.
ಅವರು ಆಸರಕೇರಿಯ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನಾವರ ಭಟ್ಕಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಭಟ್ಕಳ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ 970ನೆ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮದ್ಯ ಸೇವಿಸುವವರು ಎಂದರೆ ಯಾರಿಗೂ ಬೇಡವಾದವರು ಎಂದು ತಿಳಿಯುತ್ತಾರೆ. ಆದರೆ ಸಂಘ ಸಂಸ್ಥೆಗಳು ಅವರನ್ನು ಶಿಬಿರಕ್ಕೆ ತಂದು ಇಲ್ಲಿ ಬುದ್ಧ್ದಿವಾದ ಹೇಳಿ ಸಮಾಜದ ಎಲ್ಲರಿಗೂ ಬೇಕಾದವರನ್ನಾಗಿ ಮಾಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಇಂದು ಶಿಬಿರದಲ್ಲಿ ಕುಡಿತವನ್ನು ತ್ಯಜಿಸಿ ಉತ್ತಮ ಬಾಳ್ವೆ ಮಾಡುವವರಿಗೆ ಮತ್ತು ಈ ಹಿಂದಿನ ಮದ್ಯ ವರ್ಜನ ಶಿಬಿರದಲ್ಲಿ ಕುಡಿತವನ್ನು ತ್ಯಜಿಸಿದವರು ಕಡು ಬಡವರಿದ್ದಲ್ಲಿ ಅವರಿಗೆ ಸರಕಾರದ ಯೋಜನೆಯಡಿಯಲ್ಲಿ ಮನೆಯೊಂದನ್ನು ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದರು. ಪುರಸಭಾ ಅಧ್ಯಕ್ಷೆ ಮಂಜಮ್ಮ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಜಿ. ನಾಯಕ ಮಾತನಾಡಿ, ಮದ್ಯ ಸೇವಿಸುವವರು ಮದ್ಯದ ಅಮಲಿನಲ್ಲಿ ಎಂತಹ ಅಪರಾಧಕ್ಕೂ ಇಳಿಯುತ್ತಾರೆ. ಇಂತಹ ಶಿಬಿರವನ್ನು ಮಾಡುವ ಮೂಲಕ ಮದ್ಯ ತ್ಯಜಿಸುವವರು ಹೆಚ್ಚಾಗುತ್ತಿರುವುದರಿಂದ ಅಪರಾಧದ ಸಂಖ್ಯೆಯೂ ಕಡಿಮೆಯಾಗುವುದೆನ್ನುವ ಭರವಸೆ ಇದೆ. ಪರೋಕ್ಷವಾಗಿ ನಮ್ಮ ಇಲಾಖೆಗೆ ಸಹಾಯ ಮಾಡಿದಂತಾಗುವುದು ಎಂದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಯೋಜನೆಯ ಉ.ಕ. ನಿರ್ದೇಶಕ ಲಕ್ಷ್ಮಣ ಎಂ., ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್, ಸಮಾಜ ಸೇವಕ ಶ್ರೀಧರ ನಾಯ್ಕ ಆಸರಕೇರಿ, ಜನಜಾಗೃತಿ ವೇದಿಕೆಯ ರಾಮಚಂದ್ರ ನಾಯ್ಕ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಿ.ಬಿ. ನಾಯ್ಕ, ವಾಮನ ನಾಯ್ಕ, ವಸಂತ ಖಾರ್ವಿ, ಪ್ರಮೋದ್ ಜೋಷಿ, ರವಿ ನಾಯ್ಕ ಜಾಲಿ ಮತ್ತಿತರರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಈಶ್ವರ ಸ್ವಾಗತಿಸಿ, ಜನಜಾಗೃತಿ ವೇದಿಕೆ ಬೆಳ್ತಂಗಡಿಯ ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಬಳೆ ಮೇಲ್ವಿಚಾರಕ ನಾಗೇಶ್ ವಂದಿಸಿದರು.