ಮೀನುಗಾರರ ಅಭಿವೃದ್ಧಿಗೆ ಹೆಚ್ಚು ಅನುದಾನ ತರಲು ಸಿದ್ಧ: ನಿವೇದಿತ್‌ಆಳ್ವ್ವ
ಕಾರವಾರ, ಆ.13: ಮೀನುಗಾರರ ಅಭಿವೃದ್ಧಿ ಹಾಗೂ ಕೇಂದ್ರ, ರಾಜ್ಯ ಸರಕಾರದ ವಿವಿಧ ಇಲಾಖೆಗಳಿಂದ ಹೆಚ್ಚಿನ ಅನುದಾನ ತರಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸಿದ್ಧ್ದವಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಹೇಳಿದ್ದಾರೆ.
ಅವರು ನಗರದ ಬೈತ್‌ಕೋಲದ ಕೇಂದ್ರೀಯ ಕಡಲ ಮತ್ಸ ಸಂಶೋಧನಾ ಕೇಂದ್ರದ ಕಚೇರಿಯಲ್ಲಿ ಮೀನು ಬೆಳೆಯುವ ಉದ್ದೇಶದಿಂದ ಸಮುದ್ರದಲ್ಲಿ ತೇಲುವ ಗೂಡುಗಳನ್ನು ತಯಾರಿಸಲಾಗಿದ್ದು ಆ ಬಗ್ಗೆ ಪರಿಶೀಲನಾ ಸಭೆ ನಡೆಸಿದರು. ತೇಲುವ ಗೂಡಿನಲ್ಲಿ ಮೀನು ಕೃಷಿ ಮಾಡುವ ತಂತ್ರಜ್ಞಾನವನ್ನು ಮಂಗಳೂರು, ಗೋವಾ ಭಾಗದ ಮೀನುಗಾರರು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಉತ್ತರ ಕನ್ನಡದ ಜನರಿಗೂ ಇದರ ಪ್ರಯೋಜನ ದೊರೆಯುವ ಉದ್ದೇಶದಿಂದ ಮೀನುಗಾರ ಮಹಿಳೆಯರಿಗೆ ಕಡಲಲ್ಲಿ ತೇಲುವ ಗೂಡಿನಲ್ಲಿ ಮೀನು ಕೃಷಿ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಸಿಎಂಎಫ್‌ಆರ್‌ಐನ ಆಡಳಿತಾಧಿಕಾರಿ ಡಾ. ಕೆ.ಕೆ ಪಿಲಿಪೋಸ್ ಅಧ್ಯಕ್ಷತೆ ವಹಿಸಿದ್ದರು. ಕ.ವಿ.ವಿ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಜೆ.ಎಲ್.ರಾಠೋಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸಂಯೋಜಕ ಹರಿಹರ ಹರಿಕಂತ್ರ, ಅಶೋಕ ನಾಯ್ಕ ಹಾಜರಿದ್ದರು. ಸಿಎಂಎಫ್‌ಆರ್‌ಐ ಹಿರಿಯ ವಿಜ್ಞಾನಿ ಡಾ. ಕೃಪೇಶ್ ಶರ್ಮಾ ಸ್ವಾಗತಿಸಿದರು.