×
Ad

‘ಪರಿಶ್ರಮ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ’

Update: 2016-08-13 22:16 IST

ಕಾರವಾರ, ಆ.13: ಸ್ವಾತಂತ್ರ ದೊರಕಿ 7 ದಶಕಗಳು ಕಳೆಯುತ್ತಾ ಬಂದರೂ ಅಸ್ಪಶ್ಯತೆ ನಿವಾರಣೆ ಕುರಿತು ಅರಿವು ಮೂಡಿಸಬೇಕಾದ ಸಂದರ್ಭ ಬಂದಿರುವುದು ವಿಷಾದನೀಯ. ಅಂಬೇಡ್ಕರ್‌ರಂತಹ ಮಹನೀಯರ ದಾರಿದೀಪ ಇದ್ದರೂ ಅಸ್ಪಶ್ಯತೆ ಇಂದಿನ ಸಂಪ್ರದಾಯದ ಹೆಸರಲ್ಲಿ ಉಳಿದು ಬಿಟ್ಟಿದೆ. ಅದನ್ನು ಅರಿವಿನ ಮೂಲಕ ದೂರ ಇಡಬೇಕಾಗಿದೆ ಎಂದು ಉದ್ಯಮಿ, ಚಲನಚಿತ್ರ ನಿರ್ಮಾಪಕ ಸುಬ್ರಾಯ್ ಎಚ್. ವಾಳ್ಕೆ ಅಭಿಪ್ರಾಯಪಟ್ಟರು.

ಕಾರವಾರ ಸರಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ತಾಲೂಕು ಕಸಾಪ ಮತ್ತು ಜರ್ನಲಿಸ್ಟ್ ಯೂನಿಯನ್ ವತಿಯಿಂದ ಸಂಘಟಿಸಲಾಗಿದ್ದ ‘ಮತ್ತೆ ಮತ್ತೆ ಅಂಬೇಡ್ಕರ್’ ಎಂಬ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅಂಬೇಡ್ಕರ್ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಸಿಗುವ ಸಂವಿಧಾನ ನೀಡಿದ್ದಾರೆ. ಎಲ್ಲರೂ ಇಂದು ಪರಿಶ್ರಮದಿಂದ ಮುಂದೆ ಬರಲು ಅವಕಾಶಗಳಿವೆ. ಶಿಕ್ಷಣ ಸಂಘಟನೆ ಮತ್ತು ಹೋರಾಟ ಎಂಬ ಮೂರು ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದರು.

 ವಿದ್ಯಾರ್ಥಿಗಳು ಎರಡು ದಿನ ಸತತವಾಗಿ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ತಜ್ಞರ ಭಾಷಣ, ಚಲನಚಿತ್ರ, ಕ್ರಾಂತಿ ಗೀತೆಗಳ ಮೂಲಕ ಹಾಗೂ ಬುದ್ಧನ ಕಲಾಕೃತಿಗಳ ದರ್ಶನದಿಂದ ತಿಳಿದಿದ್ದೀರಿ. ಇಂತಹ ಅವಕಾಶ ವಿದ್ಯಾರ್ಥಿ ಜೀವನದಲ್ಲಿ ಹೊಸ ಬೆಳಕು ಚೆಲ್ಲುತ್ತದೆ. ಪಠ್ಯದ ಹೊರತಾದ ಚಿಂತನೆಗಳನ್ನು ಕಲಿಯಲು ಇದು ಸಹಾಯಕವಾಗುತ್ತದೆ. ಪರಿಶ್ರಮ ಮತ್ತು ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದರು. ಬಡತನದಲ್ಲಿ ಹುಟ್ಟಿ ಬೆಳೆದು ಶಿಕ್ಷಣ ಪಡೆದು ಉದ್ಯಮದಲ್ಲಿ ಯಶಸ್ಸಿನ ಹಾದಿ ಹಿಡಿದು ಚಿತ್ರ ಸಾಹಿತ್ಯ ಬರೆಯುವ ತನಕ ಬೆಳೆದು ಬಂದ ಹಾದಿ ಸಹ ಸತತ ಪ್ರಯತ್ನದಿಂದ ಸಾಧ್ಯವಾಯಿತು ಎಂದು ಸುಬ್ರಾಯ ವಾಳ್ಕೆ ವಿವರಿಸಿದರು. ಸಮಾಜ ಸೇವಕಿ ಅನು ಕಳಸ ಮಾತನಾಡಿ, ಅಸ್ಪಶ್ಯತೆಯನ್ನು ನಾವು ತಿಳುವಳಿಕೆಯಿಂದ ತೊಡೆದು ಹಾಕಬೇಕಿದೆ ಎಂದರು. ಕಾಲೇಜು ಶಿಕ್ಷಣದ ಹಂತದಲ್ಲಿ ಅಂಬೇಡ್ಕರ್ ವಿಚಾರಧಾರೆ ವಿವರವಾಗಿ ನಿಮಗೆ ಸಿಕ್ಕಿದೆ. ನೀವು ಅಂಬೇಡ್ಕರ್ ಅವರಂತೆ ಹೆಚ್ಚು ಹೆಚ್ಚು ಓದುವ ಸಾಧಿಸುವ ಮನಸ್ಸು ಬೆಳೆಸಿಕೊಳ್ಳಿ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಭಾರ ಪ್ರಾಚಾರ್ಯ ಜಯಕರ ಭಂಡಾರಿ, ‘ಮತ್ತೆ ಮತ್ತೆ ಅಂಬೇಡ್ಕರ್’ ಎಂಬ ವಿಚಾರ ಸಂಕಿರಣದ ಮೂಲಕ ಕಾಲೇಜಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆದಿದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನವಾಗಿದೆ ಎಂದರು.

ಅಂಬೇಡ್ಕರ್ ಅರಿವು ಪಡೆದವರು ಹಾಗೂ ಕೆಳವರ್ಗದಿಂದ ಬಂದು ಉದ್ಯೋಗವಕಾಶ ಪಡೆದವರು ಮೇಲ್ಮಟ್ಟಕ್ಕೆ ಬಂದ ನಂತರ, ತಳವರ್ಗದಲ್ಲಿ ಇರುವವರನ್ನು ಮರೆಯದೆ ಮೇಲೆತ್ತಬೇಕು. ನಾವು ನಿಂತು ಬಂದ ನೆಲೆಯನ್ನು ಮರೆಯಬಾರದು ಎಂದು ಜಯಕರ ಅಭಿಪ್ರಾಯಪಟ್ಟರು.ವೇದಿಕೆಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಮಯ್ಯೆ ಸೈಯದ್, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ವಿಜಯಾ ಡಿ.ನಾಯ್ಕ, ಟೈಮ್ಸ್ ಆಫ್ ಇಂಡಿಯಾ ವರದಿಗಾರ ದೀಪಕ್ ಕುಮಾರ್ ಶೈಣ್ವಿ ಉಪಸ್ಥಿತರಿದ್ದರು. ಕಾರವಾರ ತಾಲೂಕು ಕಸಾಪ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News