ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡಲು ವೀಣಾ ಅಚ್ಚಯ್ಯ ಕರೆ
ಮಡಿಕೇರಿ ಆ.13 : ಗ್ರಾಮೀಣ ಸೊಗಡನ್ನು ಇಂದಿಗೂ ಜೀವಂತವಾಗಿಟ್ಟಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು, ಹಿರಿಯರು ಕಿರಿಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಕರೆ ನೀಡಿದ್ದಾರೆ.
ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಯೂತ್ ಹಾಸ್ಟೆಲ್ ಅಸೋಸಿಯೇಶನ್ ಆಫ್ ಇಂಡಿಯಾ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ 25ನೆ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯುವುದು ಕಡಿಮೆಯಾಗುತ್ತಿದ್ದು, ಭತ್ತದ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಫಸಲಿಗೆ ಇನ್ನಷ್ಟು ಹೆಚ್ಚಿನ ಬೆಂಬಲ ಬೆಲೆ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲಾಗುವುದು ಎಂದು ವೀಣಾ ಅಚ್ಚಯ್ಯ ಅವರು ಇದೇ ಸಂದಭರ್ದಲ್ಲಿ ತಿಳಿಸಿದರು. ಆಸ್ಟ್ರೇಲಿಯಾದಂತಹ ರಾಷ್ಟ್ರದಲ್ಲಿ 3-4 ವರ್ಷದ ಮಕ್ಕಳಿಗೆ ಈಜು ಸೇರಿದಂತೆ ನಾನಾ ಕ್ರೀಡಾ ತರಬೇತಿಯನ್ನು ನೀಡಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಾರೆ. ಅದೇ ರೀತಿ ಇಲ್ಲಿಯೂ ಸಹ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅವರು ಸಲಹೆ ನೀಡಿದರು. ಪ್ರಮುಖರಾದ ನಾಪಂಡ ಮುತ್ತಪ್ಪ ಅವರು ಮಾತನಾಡಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀ ಬಾಯಿ, ಹಾಕತ್ತೂರು ಗ್ರಾಪಂ ಅಧ್ಯಕ್ಷರಾದ ಶಾರದ ರಾಮಕೃಷ್ಣ, ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಎಂ.ಬಿ.ಜೋಯಪ್ಪ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ, ಮಾಜಿ ಅಧ್ಯಕ್ಷರಾದ ಪಿ.ಪಿ.ಸುಕುಮಾರ್, ಸಾಬಾ ಸುಬ್ರಮಣಿ, ಇಂಧುಮತಿ, ಯುವ ಒಕ್ಕೂಟದ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು. ಜಿಲ್ಲೆಯಲ್ಲಿ ಉತ್ತಮ ಯುವ ಸಂಘ ಪ್ರಶಸ್ತಿಯನ್ನು ಗಾಳಿಬೀಡು ಯುವ ಒಕ್ಕೂಟಕ್ಕೆ ನೀಡಲಾಯಿತು. ಅಧ್ಯಕ್ಷರಾದ ಗಿರೀಶ್ ಅವರನ್ನು ಇದೇ ಸಂದಭರ್ದಲ್ಲಿ ಸನ್ಮಾನಿಸಿ, 25 ಸಾವಿರ ರೂ. ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.