ಗುಂಡಬಾಳ ತೂಗು ಸೇತುವೆಗೆ ನಿವೇದಿತ್ ಆಳ್ವಚಾಲನೆ
ಹೊನ್ನಾವರ, ಆ. 13: ತಾಲೂಕಿನ ಚಿಕ್ಕನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡಬಾಳಾದ ಹೊಳೆಗೆ ಅಡ್ಡಲಾಗಿ ಮುಟ್ಟಾದಿಂದ ಕೆಂಚಗಾರಗೆ ಸಂಪರ್ಕಿಸುವ 1.30 ಕೋಟಿ ರೂ. ವೆಚ್ಚದಲ್ಲಿ ಸುಮಾರು 70 ಮೀಟರ್ ಉದ್ದದ ತೂಗು ಸೇತುವೆ ಕಾಮಗಾರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಆರೋಗ್ಯ ಮಾತಾ ಪ್ರೌಢ ಶಾಲೆಯ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರ ವಿವಿಧ ಯೋಜನೆಗಳ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಪಣ ತೊಟ್ಟಿದೆ. ಎಲ್ಲ ಯೋಜನೆಗಳನ್ನು ಗ್ರಾಮಸ್ಥರು ಪರಿಪೂರ್ಣವಾಗಿ ಸದುಪಯೋಗಪಡಿಸಿಕೊಂಡರೆ ಸರಕಾರ ರೂಪಿಸುವ ಯೋಜನೆಗಳು ಸಾರ್ಥಕವಾಗಲಿದೆ ಎಂದರು.ಇಲ್ಲಿನ ಜನರ ಸಮಸ್ಯೆಗಳನ್ನು ಅರಿತು ಈ ಮೊದಲು ನೀಡಿದ್ದ ಭರವಸೆಯಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಚಿಕ್ಕನಗೋಡ ಗ್ರಾಮ ಪಂಚಾಯತ್‌ಗಳ ಸಹಭಾಗಿತ್ವದಲ್ಲಿ 1.30 ಕೋಟಿ ರೂ. ವೆಚ್ಚದ ಸುಮಾರು 70 ಮೀಟರ್ ಉದ್ದದ ತೂಗುಸೇತುವೆ ಕಾಮಗಾರಿ ಶೀಘ್ರ ಜನತೆಯ ಸದ್ಬಳಕೆಗೆ ಕಲ್ಪಿಸಲಾಗುವುದು ಎಂದು ನಿವೇದಿತ್ ಆಳ್ವ ನುಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಗೌಡ ಮಾತನಾಡಿ, ಮಳೆಗಾಲದಲ್ಲಿ ಶರಾವತಿ ನದಿ ಉಕ್ಕಿ ಹರಿದು ನೆರೆ ಬಂದಾಗ ಜನರ ಸಂಕಷ್ಟ ಹೇಳತೀರದಾಗಿದೆ. ಈ ಸೇತುವೆಯ ನಿರ್ಮಾಣದಿಂದ ಜನ ನಿರಾಳರಾಗಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ್ ಎನ್. ತೆಂಗೇರಿ ಮಾತನಾಡಿ, ಕೆಲಸಕ್ಕೆ ಬಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಎಂದು ಮಾತನಾಡಿಕೊಳ್ಳುತ್ತಿದ್ದ ಜನರಿಗೆ ಪ್ರಾಧಿ ಕಾರದಲ್ಲಿ ಯಾವ ರೀತಿ ಕೆಲಸ ಮಾಡಿ ತೋರಿಸಬಹುದು ಎನ್ನುವುದು ನಿವೇದಿತ್ ಆಳ್ವರವರ ಕಾರ್ಯಕ್ಷಮತೆಯಿಂದ ತೋರುತ್ತದೆ ಎಂದರು.ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಮಾರು 100 ಕಾಲುಸಂಕ, 8 ಮೀನು ಮಾರುಕಟ್ಟೆ, ನಾಲ್ಕು ತೂಗುಸೇತುವೆ ಸೇರಿದಂತೆ ಸುಮಾರು 25 ಕೋಟಿ ರೂ. ಗಿಂತ ಹೆಚ್ಚಿನ ಕಾಮಗಾರಿಗಳನ್ನು ಕೈಗೊಂಡ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸಾರ್ವಜನಿಕರ ಪರವಾಗಿ ಆರೋಗ್ಯ ಮಾತಾ ಚರ್ಚ್‌ನ ಧರ್ಮ ಗುರುಗಳಾದ ವಂ. ಫಾ. ಎಡ್ವಿನ್ ಡಿಸೋಜಾರವರು ನಿವೇದಿತ್ ಆಳ್ವರನ್ನು ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕನಕೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಮಾವಿನಕುರ್ವಾ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಸವಿತಾ ಕೃಷ್ಣ ಗೌಡ, ತಾಲೂಕು ಪಂಚಾಯತ್ ಸದಸ್ಯ ಆರ್. ಪಿ. ನಾಯ್ಕ, ಹಡಿನಬಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ನಾಯ್ಕ ಹಾಗೂ ಗ್ರಾಮ ಪಂಚಾಯತ್‌ನ ಸದಸ್ಯರು ಉಪಸ್ಥಿತರಿದ್ದರು