‘ಪ್ರತಿಫಲಾಪೇಕ್ಷೆಯಿಲ್ಲದ ಸೇವೆ ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯಗುರಿ’
ಕುಶಾಲನಗರ, ಆ.13: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಸೇವೆ ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯಗುರಿಯಾಗಿದೆ ಎಂದು ಪ್ರೊ.ಕೇಶವಯ್ಯ ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಾಜಕ್ಕೆ ತಮ್ಮದೆಯಾದ ಅಮೂಲ್ಯ ಸೇವೆಯನ್ನು ನಿರಂತರವಾಗಿ ಸಲ್ಲಿಸಿದಾಗ ಮಾತ್ರ ದೇಶದ ಭವಿಷ್ಯ ಚಿತ್ರಣ ಬದಲಾಗಲು ಸಾಧ್ಯ ಹಾಗೂ ಸಮಾಜದ ಒಳಿತಿಗಾಗಿ ನಿಮ್ಮ ಸೇವೆ ಸದಾ ಸಿದ್ಧವಾಗಿರಬೇಕೆಂದು ಕಿವಿಮಾತು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಸುಬ್ರಹ್ಮಣ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಬೌದ್ಧಿಕ, ಸಾಮಾಜಿಕ ಬೆಳವಣಿಗೆಗೆ ಹಾಗೂ ಶಿಸ್ತನ್ನು ರೂಡಿಸಿಕೊಳ್ಳಲು ಪೂರಕವಾಗಿರುವಂತಹದ್ದು ಎಂದರು.
ಕಾರ್ಯಕ್ರಮದಲ್ಲಿ ರಾ.ಸೇ.ಯೋಜನೆಯ ಯೋಜನಾಧಿಕಾರಿ ಸಿ. ಪುಟ್ಟರಾಜ್, ಕಾಲೇಜಿನ ಗ್ರಂಥಪಾಲಕ ಜಿ.ಎಸ್.
ಚಂದ್ರಶೇಖರ್, ರಾ.ಸೇ.ಯೋಜನೆಯ ವಿದ್ಯಾರ್ಥಿ ಅಶೋಕ್ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು, ಆಡಳಿತ ವರ್ಗದ ಸದಸ್ಯರು ಮತ್ತು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.