ಮಾರ್ಚ್ ಅಂತ್ಯದೊಳಗೆ ಎಲ್ಲರಸ್ತೆಗಳು ಸಂಚಾರಕ್ಕೆಮುಕ್ತ: ಶಾಸಕ ಶ್ರೀನಿವಾಸ್
ತರೀಕೆರೆ, ಆ.13: ತಾಲೂಕಿನಾದ್ಯಂತ ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು 65 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಮಾರ್ಚ್ ಅಂತ್ಯದೊಳಗೆ ಎಲ್ಲಾ ರಸ್ತೆಗಳನ್ನು ಸಂಚಾರ ಮುಕ್ತಗೊಳಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.
ಅವರು ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಿಕಾಸ ಯೋಜನೆಯಡಿ 75ಲಕ್ಷ ರೂ. ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮ ವಿಕಾಸ ಯೋಜನೆಯಡಿ ಸರಕಾರ 75ಲಕ್ಷ ರೂ.ಮಂಜೂರು ಮಾಡಿದ್ದು, ಉಳಿದ 75ಲಕ್ಷ ರೂ. ಗ್ರಾಮ ಪಂಚಾಯತ್ ನರೇಗಾ ಯೋಜನೆಯಡಿ ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮಗಳಲ್ಲಿ ರೈತರ ಜಮೀನುಗಳ ಅಭಿವೃದ್ಧಿ, ಚೆಕ್ ಡ್ಯಾಂ, ರಸ್ತೆ ಅಭಿವೃದ್ಧಿ, ಚರ್ಚ್, ಮಸೀದಿ, ಗ್ರಂಥಾಲಯ, ದೇವಸ್ಥಾನ, ಸಮುದಾಯ ಭವನ ಹಾಗೂ ತಿಪ್ಪೇಗುಂಡಿಗಳನ್ನು ಆಧುನೀಕರಣಗೊಳಿಸುವ ಮೂಲಕ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬಹುದಾಗಿದೆ ಎಂದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸೊಪ್ಪಿನಮಟ್ಟಿಯಲ್ಲಿ ನಿರ್ಮಿಸಿರುವುದರಿಂದ ಕುಡಿಯುವ ನೀರಿನ ತೊಟ್ಟಿಯು ಅವೈಜ್ಞ್ಞಾನಿಕವಾಗಿದ್ದು, ಜನತೆಗೆ ನೀರೊದಗಿಸಲು ಸಾಧ್ಯವಾಗಿಲ್ಲ. ಶೀಘ್ರ ಹೊಸದಾಗಿ ಫಿಲ್ಟರ್ ಹಾಗೂ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿ ಸಮಸ್ಯೆ ಬಗೆಹರಿಸಲಾಗುವುದು. ಸರಕಾರಿ ಕಚೆೇರಿಗಳಲ್ಲಿ ಅಧಿಕಾರಿಗಳು ಜನತೆಗೆ ಸ್ಪಂದಿಸಿ ಕೆಲಸ ಮಾಡುತ್ತಿಲ್ಲ. ಈ ಕಾರಣದಿಂದಾಗಿ ತಾಲೂಕಿನ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸ್ಥಳದಲ್ಲಿಯೇ ಜನತೆಯ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾದರೆ, ದೇಶದ ಅಭಿವೃದ್ಧಿಯಾದಂತೆ.ಗ್ರಾಮಗಳ ಅಭಿವೃದ್ಧಿಯಿಂದ ಜನತೆ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ. ಸಮಗ್ರ ಅಭಿವೃದ್ಧಿಯಿಂದ ಜನರ ಜೀವನಮಟ್ಟ ಸುಧಾರಣೆಯಾಗಲಿದೆ ಎಂದರು.
ತಾಲೂಕು ಪಂಚಾಯತ್ ಸದಸ್ಯ ರಾಮಪ್ಪ ಮಾತನಾಡಿ, ಬಾವಿಕೆರೆ ಗ್ರಾಮವು ಪುನರ್ವಸತಿ ಯೋಜನೆಯ ಸಂದಭರ್ದಲ್ಲಿ ನಿರ್ಮಿತವಾದ ಗ್ರಾಮವಾಗಿದ್ದು, ಇಲ್ಲಿ ಸುಸಜ್ಜಿತವಾದ ರಸ್ತೆಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿದರೆ ತಾಲೂಕಿನಲ್ಲಿಯೇ ಮಾದರಿ ಗ್ರಾಮವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಅನ್ಬು, ತಾಪಂ ಸದಸ್ಯರಾದ ಕೆಂಪೇಗೌಡ, ಮಂಜುಳಾ, ಗ್ರಾಪಂ ಅಧ್ಯಕ್ಷೆ ಭಾಗ್ಯಾ, ಉಪಾಧ್ಯಕ್ಷ ಕುಮಾರ್, ತಾಪಂ ಮಾಜಿ ಸದಸ್ಯ ಸೀತಾರಾಮ್, ಎಪಿಎಂಸಿ ಮಾಜಿ ಅಧ್ಯಕ್ಷ ಪಾಲಯ್ಯ, ಮುಖಂಡರಾದ ಎಚ್.ಎನ್.ಮಂಜುನಾಥ್, ಪಿಡಿಒ ಪಾಂಡುರಂಗ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.