ಜೈವಿಕ ಸರಪಳಿ ತುಂಡಾದರೆ ಜೀವಜಗತ್ತಿಗೆ ಅಪಾಯ ತಪ್ಪಿದ್ದಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು, ಆ.13: ಮಾನವನ ಅತಿಯಾದ ದುರಾಸೆಯಿಂದ ಜೈವಿಕ ಸರಪಳಿ ತುಂಡಾದರೆ ಜೀವ ಜಗತ್ತಿಗೆ ಅಪಾಯ ತಪ್ಪಿದ್ದಲ್ಲ ಎಂದು ಶಾಸಕ ಸಿ.ಟಿ.ರವಿ ಕಳವಳ ವ್ಯಕ್ತಪಡಿಸಿದರು.
ನಗರದ ಐಡಿಎಸ್‌ಜಿ ಸರಕಾರಿ ಕಾಲೇಜು ಆವರಣದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಐಡಿಎಸ್‌ಜಿ ಸರಕಾರಿ ಕಾಲೇಜು, ನಗರಸಭೆ ಮತ್ತು ಅರಣ್ಯ ಇಲಾಖೆ ಆಶ್ರಯದಲ್ಲಿ ನಡೆದ ಸ್ವಚ್ಛತಾ ಆಂದೋಲನ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರದ ಹಾನಿಯಿಂದ ಶುದ್ಧ ನೀರಿಗಾಗಿ ಬಾಟಲಿಗಳಿಗೆ ಮೊರೆ ಹೋಗಿದ್ದೇವೆ. ಈಗಿರುವ ಸ್ಥಿತಿ ಮುಂದುವರಿದಲ್ಲಿ ಮುಂದೊಂದು ದಿನ ಉಸಿರಾಡುವ ಶುದ್ಧಗಾಳಿಗೂ ಪರದಾಡುವ ಸನ್ನಿವೇಶಗಳು ತಲೆದೋರುತ್ತವೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ, ಭೂಮಿ ಮತ್ತು ನೀರು ಮಾಲಿನ್ಯವಾಗುವುದನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯ. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರ ಮತ್ತು ಜೀವರಾಶಿಗಳಿಗೆ ಅವಿನಾಭಾವ ಸಂಬಂಧವಿದೆ. ಈ ಎರಡರಲ್ಲಿ ಯಾವುದಕ್ಕೂ ಹಾನಿಯಾಗದಂತೆ ಎಚ್ಚರವಹಿಸಬೇಕು ಎಂದರು.
ನಗರಸಭಾ ಅಧ್ಯಕ್ಷ ದೇವರಾಜಶೆಟ್ಟಿ, ಐಡಿಎಸ್‌ಜಿ ಕಾಲೆಜು ಪ್ರಾಂಶುಪಾಲೆ ಡಾ.ಝರೀನಾ ಕೌಸರ್ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪವನ್, ತಾಲೂಕು ಘಟಕ ನಿಕಟಪೂರ್ವ ಅಧ್ಯಕ್ಷ ಬಿ.ಆರ್.ಜಗದೀಶ್, ಗೌರವ ಕಾರ್ಯದರ್ಶಿ ಪ್ರಕಾಶ್, ಗೌರವ ಕೋಶಾಧ್ಯಕ್ಷ ಜಗದೀಶ್, ಪದಾಧಿಕಾರಿಗಳಾದ ಎನ್‌ವೈಕೆ ಮಂಜುನಾಥರಾವ್, ಸಿ.ಕೆ.ಜಗದೀಶ್, ಹೇಮಲತಾ, ಸಿದ್ದೇಗೌಡ, ವಸ್ತಾರೆ ಹೋಬಳಿ ಅಧ್ಯಕ್ಷ ಟಿ.ಎ.ನಿಂಗೇಗೌಡ, ಲಕ್ಯಾ ಹೋಬಳಿ ಅಧ್ಯಕ್ಷ ಬಿ.ವಿ.ಕೃಷ್ಣಮೂರ್ತಿ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ರಾಜಣ್ಣ, ಗುರುಸ್ವಾಮಿ, ಕ್ರೀಡಾ ನಿರ್ದೇಶಕ ಯೋಗೀಶ್, ಎನ್ನೆಸ್ಸೆಸ್ ಘಟಕ ದ ಅಧಿಕಾರಿ ಸಂಪತ್ ಮತ್ತಿತರರು ಉಪಸ್ಥಿತರಿದ್ದರು.