ಹಾಸನ: ಕಾರ್ಮಿಕ ಇಲಾಖೆಯ ಲೋಪ ಖಂಡಿಸಿ ಕಟ್ಟಡ ಕಾರ್ಮಿಕರ ಸಂಘದಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ
ಹಾಸನ,ಆ.14: ಕಟ್ಟಡ ಕಾರ್ಮಿಕ ಇಲಾಖೆ ಲೋಪ ಖಂಡಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ತೆರಳಿದ ಅವರು, ಜಿಲ್ಲೆ ಮತ್ತು ರಾಜ್ಯದ ಕಟ್ಟಡ ಕಾರ್ಮಿಕರ ಸವೋತಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘಟನೆ ನಮ್ಮದು. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 10,20,000 ಕಾರ್ಮಿಕರ ನೊಂದಾಣಿಯಾಗಿದೆ. ಹಾಸನ ಜಿಲ್ಲೆಯಲ್ಲಿ 23,795 ಕಾರ್ಮಿಕರು ನೊಂದಾಣಿ ಮಾಡಿಕೊಂಡಿದ್ದಾರೆ. ಮಂಡಳಿಯಲ್ಲಿ ಸಂಗ್ರಹವಾಗಿರುವ 3,500 ಕೋಟಿ ರೂ ಹಣದಲ್ಲಿ ಈಗ 98 ಕೋಟಿ 85 ಲಕ್ಷ ರೂ ಹಣವನ್ನು ಫಲಾನುಭವಿಗಳಿಗೆ ಹಂಚಲಾಗಿದೆ. ಇನ್ನುಳಿದ 20,400 ಅರ್ಜಿಗಳು ವಿಲೇವಾರಿಯಾಗದೆ ತಟಸ್ಥವಾಗಿದೆ ಎಂದರು. ಜಿಲ್ಲೆಯಲ್ಲಿ 3 ಕೋಟಿ 18 ಲಕ್ಷ ರೂಗಳನ್ನು 5,600 ಫಲಾನುಭವಿಗಳಿಗೆ ಸಹಾಯಧನವನ್ನು ನೀಡಲಾಗಿದೆ. ಎರಡು ವರ್ಷಗಳಿಂದ ಸಲ್ಲಿಸಲಾದ ಮದುವೆ, ಅಪಘಾತ ಸಾವಿನ ಸುಮಾರು 70 ಅರ್ಜಿಗಳು ವಿಲೇವಾರಿಯಾಗದೆ ಚಿಕ್ಕಮಗಲೂರಿನಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯಲ್ಲೆ ಇದ್ದು, ಮದುವೆ, ಶೈಕ್ಷಣಿಕ, ಅಪಘಾತ ಮತ್ತು ಸ್ವಾಭಾವಿಕ ಸಾವುಗಲ ಧನ ಸಹಾಯದ ಪರಿಶೀಲನೆ, ವಿಲೇವಾರಿ ಮತ್ತು ಮಂಜೂರು ಮಾಡುವ ಅಧಿಕಾರವನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಎಲ್ಲಾವನ್ನು ಆನ್‌ಲೈನ್ ಮೂಲಕ ನಿರ್ವಹಿಸಬೇಕಾಗಿರುವುದರಿಮದ ಕಂಪ್ಯೂಟರ್ ಸರ್ವರ್ ತೊಂದರೆಯಿಂದ ಸುಮಾರು 300 ಅರ್ಜಿಗಳು ಅಲ್ಲೆ ತಟಸ್ಥವಾಗಿದೆ. ಹಳೆ ಅರ್ಜಿಗಳ ನವೀಕರಣ ಮಾಡಲಾಗುತ್ತಿಲ್ಲ ಎಂದು ದೂರಿದರು. ಬಾರದ ಮೂರು ದಿನಗಳಲ್ಲಿ ಮಾತ್ರ ಅರ್ಜಿ ಪರಿಶೀಲನೆ ಮಾಡುತ್ತಿರುವುದರಿಂದ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಹೇಳಿದರು.
ತಾಲ್ಲೂಕಿನ ಹೂಸೂರಿನ ರಂಗಸ್ವಾಮಿ ಇವರು ಕಛೇರಿಗೆ ಬರದೆ ಅರ್ಜಿಗೆ ಸಹಿ ಹಾಕದೆ ನೊಂದಣಿಯಾಗಿರುವುದು, ಕಡತ ಕಳೆದು ಹೋಗಿರುವುದನ್ನು ಸರಿಪಡಿಸದೆ ಸಬೂಬು ಹೇಳುತ್ತಿದ್ದಾರೆ.
ಕೂಡಲೇ ಕಾರ್ಮಿಕನಿಗೆ ನ್ಯಾಯ ಒದಗಿಸಿ, ಕಾರ್ಮಿಕರಿಗೆ ಅನುಕೂಲವಾಗುವಂತೆ ಏಕರೂಪತೆ ನಿಯಮವನ್ನು ಜಾರಿಗೆ ತಂದು ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಜಿಲ್ಲಾಧ್ಯಕ್ಷರಾದ ಹೆಚ್.ಟಿ. ರಾಮೇಗೌಡ, ಜಿಲ್ಲಾ ಕಾರ್ಯದರ್ಶಿ ಎನ್. ಗಿರೀಶ್, ಉಪಾಧ್ಯಕ್ಷ ಹೆಚ್.ಎನ್. ಪ್ರಕಾಶ್, ಆರ್. ಮಂಜೇಗೌಡ, ಎ.ಎಸ್. ಗೋವಿಂದ್, ಖಜಾಂಚಿ ಕೆ.ವಿ. ಸುಬ್ರಮಣ್ಯ ಇತರರು ಪಾಲ್ಗೊಂಡಿದ್ದರು.