‘ಕೆಸರುಗದ್ದೆ ಕ್ರೀಡೆಯನ್ನು ಉಳಿಸಿ ಬೆಳೆಸಿ’
ವೀರಾಜಪೇಟೆ, ಆ.14: ಭಾರತ ದೇಶದ ಸಂಸ್ಕೃತಿ ಆಚಾರ-ವಿಚಾರಗಳು ಉತ್ತಮವಾಗಿರುವುದರಿಂದ ಹೊರದೇಶದವರು ಕೂಡ ನಮ್ಮ ಸಂಸ್ಕೃತಿಯನ್ನು ನೋಡಲು ಬರುತ್ತಾರೆ. ಅದರಲ್ಲೂ ಕೊಡಗಿನವರ ಸಂಸ್ಕೃತಿ ವಿಶೇಷವಾಗಿದೆ ಎಂದು ಎರಡನೆ ಹೆಚ್ಚುವರಿ ನ್ಯಾಯಾಧೀಶ ಟಿ.ಎಂ.ನಾಗರಾಜ ಹೇಳಿದರು.
ವೀರಾಜಪೇಟೆ ವಕೀಲರ ಸಂಘದ ವತಿಯಿಂದ ಕಕ್ಕಡ ಸಂತೋಷ ಕೂಟ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಘದ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೊಡಗಿನ ಪರಿಸರ ಸೌಂದರ್ಯ ನೋಡಿದರೆ ಹೊರ ಜಿಲ್ಲೆ, ರಾಜ್ಯದಿಂದ ಬರುವವರ ಮನಸೆಳೆಯುತ್ತಿದೆ. ಹಾಗೆ ಯೇ ಕೊಡಗಿನ ಸಂಸ್ಕೃತಿ, ಅಚಾರ-ವಿಚಾರಗಳು ಕೆಸರುಗದ್ದೆ ಓಟ ತುಂಬ ಮೆಚ್ಚುಗೆ ಪಡುವಂತಹ ಕ್ರೀಡೆಯಾಗಿದ್ದು, ಮುಂದೆಯೂ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ನ್ಯಾ. ನಾಗರಾಜ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಜಯಪ್ರಕಾಶ್ ಮಾತನಾಡಿ, ವಕೀಲರ ಸಂಘದ ಸದಸ್ಯರು ತಮ್ಮ ವೃತ್ತಿಯೊಂದಿಗೆ ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಉತ್ತಮ ಕಾರ್ಯ. ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸುವ ಸಂಪ್ರದಾಯ ಮುಂದೆಯೂ ಹೆಚ್ಚಿನ ಸಾಧನೆ ಮಾಡಲು ಸಹಕಾರ ನೀಡಿದಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪಪಂ ಸದಸ್ಯ, ವಕೀಲ ಕೆ.ಎನ್.ವಿಶ್ವನಾಥ್, ಜಿಪಂ ಸದಸ್ಯ ವಕೀಲ ಎನ್.ಕಿರಣ್ ಕಾರ್ಯಪ್ಪ, ಗ್ರಾಪಂ ಸದಸ್ಯ ವಕೀಲ ಎನ್.ಎಸ್.ಪ್ರಶಾಂತ್, ರಾಜ್ಯ ಸರಕಾರದ ನೋಟರಿ ವಕೀಲ ಎಂ.ಎಸ್.ವೆಂಕಟೇಶ್, ಭಾರತ ಸರಕಾರದ ನೋಟರಿಯ ಎಂ.ಎಸ್.ಕಾಶಿಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಎನ್.ಜಿ.ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ವಿ.ಜಿ.ರಾಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಕಾಮತ್, ಸಂಘದ ಕಾರ್ಯದರ್ಶಿ ಬಿ.ಎನ್.ಸುಬ್ಬಯ್ಯ ಉಪಸ್ಥಿತರಿದ್ದರು.
ವಕೀಲೆ ಜಾಯ್ಸಿ ಲವೀನಾ ಕ್ಯಾಸ್ಟಲಿನೋ ಸ್ವಾಗತಿಸಿದರು. ತಾರಾ ಸುಬ್ಬಯ್ಯ ನಿರೂಪಿಸಿ, ಬಿ.ಟಿ.ಗೀತಾ ವಂದಿಸಿದರು.