ಇಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ಕಡ್ಡಾಯ
ಕಾರವಾರ, ಆ.14: ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಆ.15ರಿಂದ ಪ್ಲಾಸ್ಟಿಕ್ ನಿಷೇಧ ಕಡ್ಡಾಯವಾಗಿ ಜಾರಿಯಾಗಲಿದ್ದು, ಈಗಾಗಲೇ ಜಿಲ್ಲಾಡಳಿತ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ, ಸಭೆಗಳನ್ನು ನಡೆಸಿದ್ದು ಮುಂದಿನ ದಿನದಲ್ಲಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ.
ಪ್ಲಾಸ್ಟಿಕ್ ನಿಷೇಧ ಜಾರಿಗೆ ಕೇಂದ್ರ ಸರಕಾರ ಸುತ್ತೋಲೆಯಂತೆ ಪರಿಸರ ಕಾಯ್ದೆ 1986ರಂತೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವ ಬಗ್ಗೆ ಅರಣ್ಯ ಇಲಾಖೆ ಈ ಹಿಂದೆ ಅಧಿಸೂಚನೆ ಹೊರಡಿಸಿದೆ. ಆ ಅಧಿಸೂಚನೆಯಂತೆ ಎಲ್ಲ ರೀತಿಯ ಪ್ಲಾಸ್ಟಿಕ್ ನಿಷೇಧ ಆ.15ರಿಂದ ಕಡ್ಡಾಯವಾಗಿ ಜಾರಿಯಾಗಲಿದೆ.
ಪ್ಲಾಸ್ಟಿಕ್ ಬಳಕೆಯಾದರೆ ಇನ್ನು ಮುಂದೆ ಕಾನೂನು ರೀತಿಯಲ್ಲಿ ಕ್ರಮವಾಗಲಿದ್ದು, ಎಲ್ಲ ತಾಲೂಕು ಮಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ ಅನುಷ್ಠಾನಕ್ಕೆ ಸಮಿತಿ ರಚನೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರರು ಸಮಿತಿಗೆ ಅಧ್ಯಕ್ಷರಾಗಿದ್ದು ನಗರ ಸ್ಥಳೀಯ ಸಂಸ್ಥೆಯ ಪೌರಾಯುಕ್ತರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ತಾಪಂ ಕಾರ್ಯನಿರ್ವಹಣಾಧಿಕಾರಿ, ಗ್ರಾಪಂ ಪಿಡಿಒ ಪರಿಸರ ಇಲಾಖೆ ಅಧಿಕಾರಿ, ಜಿಇಒ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಇನ್ನಿತರರು ಸದಸ್ಯರಾಗಿದ್ದಾರೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಕಡ್ಡಾಯವಾಗಿದ್ದರಿಂದ ಇನ್ನು ಮುಂದೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಬಾವುಟ, ಲೋಟ, ಪ್ಲೇಟ್, ಫ್ಲೆಕ್ಸ್‌ಗಳ ತಯಾರಿಕೆ ಹಾಗೂ ಮಾರಾಟ ಮಾಡುವಂತಿಲ್ಲ. ಜಿಲ್ಲೆಯ ಯಾವುದೇ ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡುವಂತಿಲ್ಲ. ಪ್ಲಾಸ್ಟಿಕ್ ಬಳಕೆ ನಿಷೇಧ ಕಾನೂನನ್ನು ಉಲ್ಲಂಘಿಸಿದರೆ ಪರಿಸರ ಸಂರಕ್ಷಣೆ ಕಾಯ್ದೆ 1986ರ ಸೆಕ್ಷನ್ 19ರ ಅನ್ವಯ ಆಯಾ ವ್ಯಾಪ್ತಿಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಕ್ರಮಕೈಗೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ.