×
Ad

ಕಾಫಿ ತೋಟಗಳ ಸಮಸ್ಯೆ ಗೆ ಸ್ಥಳೀಯ ಕಾರ್ಮಿಕರೇ ಕಾರಣ

Update: 2016-08-14 21:43 IST

ಮೂಡಿಗೆರೆ, ಆ.14: ಕಳೆದ ಒಂದು ದಶಕದಿಂದ ಕಾಫಿ ಉದ್ಯಮವು ಹಲವಾರು ವೈಪರೀತ್ಯಗಳ ನಡುವೆ ಸಾಗುತ್ತಿದೆ. ಕಾರ್ಮಿಕರ ಸಮಸ್ಯೆ ಕಳೆದ ಕೆಲ ವರ್ಷಗಳಿಂದ ಬೃಹತ್ತಾಗಿ ಬೆಳೆಯಲು ಕೆಲ ಸ್ಥಳೀಯ ಕಾರ್ಮಿಕರೇ ಕಾರಣ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಜೈರಾಂ ಹಾಗೂ ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಮಿಕರು ದಿನದಲ್ಲಿ 4 ಗಂಟೆ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸದಲ್ಲಿ ಶೇ.40 ರಿಂದ 50ರಷ್ಟು ಕೃತಕ ಅಭಾವವುಂಟಾಗಿ, ಕಾರ್ಮಿಕರ ಸಮಸ್ಯೆ ಸೃಷ್ಟಿಸಿದ್ದಾರೆ. ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸಲು ಬರುತ್ತಿರುವವರು ಅಸ್ಸಾಂ, ಪಶ್ಚಿಮಬಂಗಾಳ ಹಾಗೂಇತರ ರಾಜ್ಯದ ಕಾರ್ಮಿಕರಾಗಿದ್ದು, ಇವರಿಂದ ಗುರುತಿನ ಚೀಟಿ ಮತ್ತು ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಯೇ ಕೆಲಸ ಕೊಡುತ್ತಿದ್ದೇವೆ. ಮೂಲಭೂತ ಸೌಕರ್ಯಗಳಾದ ವಸತಿ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಕ್ಕೆ ನೆರವು, ವಿದ್ಯುತ್ ಪೂರೈಕೆ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ ನೀಡುವಲ್ಲಿ ಸಹಕರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸರಕಾರ ನಿಗದಿಪಡಿಸಿರುವ ರೀತಿ 8ತಾಸುಗಳ ಕಾಲ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಯಾವಾಗಲೂ ಕಾಫಿ ತೋಟಗಳಲ್ಲಿ ಕೆಲಸವಿದೆ. ಕಾಫಿ ಉದ್ಯಮವು ಶೇ.70ರಷ್ಟು ಕಾರ್ಮಿಕರನ್ನು ಅವಲಂಬಿಸಿರುವುದರಿಂದ, ನಿರಂತರವಾಗಿ ಕೆಲಸವಿರುತ್ತದೆ. ತೋಟಗಳಲ್ಲಿರುವ ಗುರುತಿನ ಚೀಟಿ, ತಪಾಸಣೆ ಹಾಗೂ ಮಾಹಿತಿ ಸಂಗ್ರಹಣೆಗಾಗಿ ಆರಕ್ಷಕ ಅಧಿಕಾರಿಗಳು ಬಂದಾಗ, ಬೆಳೆಗಾರರು ಸಹಕರಿಸಬೇಕೆಂದು ಒಕ್ಕೂಟವು ಬೆಳೆಗಾರರಿಗೆ ಕರೆ ನೀಡುತ್ತಿದೆ. ಈ ನಿಟ್ಟಿನಲ್ಲಿ ವರಿಷ್ಠಾಧಿಕಾರಿಗಳ ಮೇರೆಗೆ ಆರಕ್ಷಕ ಅಧಿಕಾರಿಗಳನ್ನು ಕರೆಸಿ, ಸಂಪೂರ್ಣ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಆ.10ರಂದು, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ನಡೆಸಿದ ಧರಣಿಯ ಸಂದರ್ಭದಲ್ಲಿ ಕಾಫಿ ಬೆಳೆಗಾರರು ಕಡಿಮೆ ಸಂಬಳದಲ್ಲಿ ಯಾವ ಸೌಲಭ್ಯವನ್ನೂ ನೀಡದೇ ಅಸ್ಸಾಂ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದನ್ನು ಕರ್ನಾಟಕ ಬೆಳೆಗಾರರ ಒಕ್ಕೂಟವು ಖಂಡಿಸುತ್ತದೆ. ಇದು ವಾಸ್ತವಾಂಶಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News