ವಿದ್ಯಾರ್ಥಿಗಳ ಶಾಂತಿ ಕ್ರಾಂತಿ ನೃತ್ಯ ಕ್ಕೆ ಮಂಡ್ಯದಲ್ಲಿ ಸಚಿವ ಡಿಕೆಶಿ ಬ್ರೇಕ್ ..!
ಮಂಡ್ಯ, ಆ.15: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಂತಿ ಕ್ರಾಂತಿ ಹಾಡಿಗೆ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳ ಫೋಟೊ ಹಿಡಿದು ನೃತ್ಯ ಮಾಡುತ್ತಿದ್ದಾಗ ಅಲ್ಲಿ ಉಪಸ್ಥಿತರಿದ್ದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಗರಂ ಆಗಿ ಶಾಲಾ ಮಕ್ಕಳ ನೃತ್ಯವನ್ನು ಅರ್ಧಕ್ಕೆ ಕೊನೆಗೊಳಿಸಲು ಸೂಚಿಸಿದ ಘಟನೆ ವರದಿಯಾಗಿದೆ.
ಮಂಡ್ಯದ ವಿವಿ ಸ್ಟೇಡಿಯಂನಲ್ಲಿ ಇಂದು ಬೆಳಗ್ಗೆ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಧ್ವಜಾರೋಹಣದ ಬಳಿಕ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಂತಿ ಕ್ರಾಂತಿ ಕನ್ನಡ ಸಿನಿಮಾ ಹಾಡು’ ಹುಟ್ಟೋದ್ಯಾಕೆ ಸಾಯೋದ್ಯಾಕೆ’ ಎಂಬ ಹಾಡಿಗೆ ಶಾಲಾ ಮಕ್ಕಳ ನೃತ್ಯ ನೋಡಿ ಗರಂ ಆಗಿ ನೃತ್ಯವನ್ನು ಅರ್ಧದಲ್ಲೆ ಕೊನೆಗೊಳಿಸುವಂತೆ ಹುಕುಂ ಮಾಡಿದರೆನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ಡಿ.ಕೆ ರವಿ, ಮಂಗಳೂರು ಡಿವೈಎಸ್ ಪಿ ಎಂ.ಕೆ ಗಣಪತಿ ಹಾಗೂ ಚಿಕ್ಕಮಗಳೂರು ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗ್ ಅವರ ಭಾವಚಿತ್ರಗಳನ್ನು ಮೂವರು ಮಕ್ಕಳು ಪ್ರದರ್ಶಿಸಿದರು. ಇದು ಸಚಿವ ಡಿಕೆಸಿ ಕೋಪಕ್ಕೆ ಕಾರಣವಾಯಿತು ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳ ನೃತ್ಯವನ್ನು ಅರ್ಧಕ್ಕೆ ನಿಲ್ಲಿಸುವಲ್ಲಿ ಯಶಸ್ವಿಯಾದ ಡಿಕೆಸಿ ಅಲ್ಲಿಯೇ ಇದ್ದ ಡಿಡಿಪಿಐ ಶಿವಮಾದು ಅವರನ್ನು ಕರೆದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಸರಕಾರದ ಆಡಳಿತ ಅವಧಿಯಲ್ಲಿ ಈ ಮೂವರು ಅಧಿಕಾರಿಗಳ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳ ನೃತ್ಯ ಸರಕಾರದ ಮುಜುಗರಕ್ಕೆ ಕಾರಣವಾಗಿತ್ತು.