ಜಾತಿ, ಸಿದ್ಧಾಂತದ ಹೆಸರಿನಲ್ಲಿ ಧರ್ಮ ಆಯುಧವಾಗಿದೆ: ಸುಧೀರ್
ತೀರ್ಥಹಳ್ಳಿ, ಆ.15: ಜನರ ಭ್ರಾತೃತ್ವ ಬೆಸೆಯಲು ಪೂರಕವಾಗಬೇಕಾಗಿದ್ದ ಧರ್ಮ ಇಂದು ಪ್ರಪಂಚದಾದ್ಯಂತ ರಕ್ತಪಿಪಾಸುಗಳ ಕೈಗೆ ಸಿಕ್ಕಿ ಜನರನ್ನು ಜಾತಿ, ಸಿದ್ಧಾಂತದ ಹೆಸರಿನಲ್ಲಿ ಕೊಲ್ಲುವ ಆಯುಧವಾಗಿ ಬಳಕೆಯಾಗುತ್ತಿದೆ ಇದು ಅತ್ಯಂತ ಕಳವಳಕಾರಿ ಬೆಳವಣಿಗೆ ಎಂದು ವಾಗ್ಮಿ ಹಾಗೂ ಪತ್ರಕರ್ತ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದ್ದ್ದಾರೆ.
ಡಾ. ಯು.ಆರ್. ಅನಂತಮೂರ್ತಿ ಸರಕಾರಿ ಪಪೂ ಕಾಲೇಜು ಸಭಾಂಗಣದಲ್ಲಿ ನಡೆದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಭಾರತವೆಂಬುದು ಕೇವಲ ಒಂದು ಧರ್ಮ, ಜಾತಿ, ತತ್ವ, ಮತ, ಸಿದ್ಧಾಂತಗಳಿಂದ ರೂಪುಗೊಂಡಿಲ್ಲ. ದೇಶ ನಿರ್ಮಾಣದಲ್ಲಿ ಎಲ್ಲ ಜಾತಿ, ಧರ್ಮದವರು ಕೈಜೋಡಿಸಿದ್ದಾರೆ. ಆದರೆ, ಈಗ ಒಂದು ನಿರ್ದಿಷ್ಟ ಗುಂಪು ಈ ದೇಶ ತಮಗೆ ಸೇರಿದ್ದು ಹಾಗೂ, ತಮ್ಮ ತತ್ವ ಸಿದ್ಧಾಂತಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂಬ ಒತ್ತಡ ಹೇರುತ್ತಿರುವುದು ಭಾರತ ಕೋಮುವಾದದತ್ತ ಜಾರುತ್ತಿರುವ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ ಎಂದು ವಿಷಾದಿಸಿದರು.
ಮಾಜಿ ಸಚಿವ, ತೀರ್ಥಹಳ್ಳಿ ವಿಧಾನಸಭಾ ಸದಸ್ಯ ಕಿಮ್ಮನೆ ರತ್ನಾಕರ್ ಮಾತನಾಡಿ, ಭಾರತಕ್ಕೆ ಸ್ವಾತಂತ್ರ ಲಭಿಸಿದ್ದು ಜಾತ್ಯತೀತವಾಗಿ, ಪಕ್ಷಾತೀತವಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಅಸಂಖ್ಯಾತ ಹಿರಿಯ ಚೇತನಗಳಿಂದಾಗಿ. ಆ ಕಾಲದಲ್ಲಿ ಸ್ವಾತಂತ್ರ ಚಳವಳಿಗೆ ಯಾವ ಕೊಡುಗೆಯನ್ನೂ ನೀಡದವರು, ಗುಟ್ಟಾಗಿ ಬ್ರಿಟಿಷರಿಗೆ ಬೆಂಬಲ ನೀಡಿದವರು ಈಗ ದೇಶಭಕ್ತಿಯ ಪಾಠ ಮಾಡುತ್ತಿರುವುದು ವಿಷಾದನೀಯ ಎಂದರು.
ಜಿಪಂ ಸದಸ್ಯರಾದ ಕಲ್ಪನಾ ಪದ್ಮನಾಭ್, ಭಾರತಿ ಪ್ರಭಾಕರ್, ಅಪೂರ್ವ ಶರತ್, ಶ್ರೀನಿವಾಸ್, ತಹಶೀಲ್ದಾರ್ ಲೋಕೇಶ್ವಪ್ಪ, ತಾಪಂ ಅಧ್ಯಕ್ಷೆ ನವಮಣಿ, ಉಪಾಧ್ಯಕ್ಷೆ ಯಶೋದಾ ಮತ್ತಿತರರು ಉಪಸ್ಥಿತರಿದ್ದರು.