ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಸಂಸದಿಂದ ಧರಣಿ
ಮಡಿಕೇರಿ, ಆ.15: ದಲಿತರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ನಗರದ ಗಾಂಧಿ ಮೈದಾನದಲ್ಲಿ ಆ.14ರಂದು ಮಧ್ಯರಾತ್ರಿ ಧರಣಿ ನಡೆಸಿತು.
ನಗರದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನದಿಂದ ರಾತ್ರಿ ಮೆರವಣಿಗೆಯಲ್ಲಿ ಸಾಗಿದ ಸಮಿತಿಯ ಪ್ರಮುಖರು ಹಾಗೂ ಸದಸ್ಯರು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದರು. ಗಾಂಧಿ ಮೈದಾನದಲ್ಲಿ ಕುಳಿತ ಧರಣಿ ನಿರತರು ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕೆಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷ ಕಳೆದಿದ್ದರೂ ದೇಶದಲ್ಲಿರುವ ದಲಿತರ ಅಭಿವೃದ್ಧಿ ಇನ್ನೂ ಕೂಡ ಸಾಧ್ಯವಾಗಿಲ್ಲ. ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ರಚಿಸಿ ಸರ್ವ ಸಮಾನತೆಗಾಗಿ ಶ್ರಮಿಸಿದರು. ಆದರೆ ದೇಶದಲ್ಲಿ ಇಂದಿಗೂ ಮೇಲು-ಕೀಳೆನ್ನುವ ಮನೋಭಾವ ಮುಂದುವರಿದಿದೆ. ದಲಿತರ ಮೇಲಿನ ಶೋಷಣೆ, ವಂಚನೆ ಹೆಚ್ಚಾಗುತ್ತಲೇ ಇದ್ದು, ನೊಂದ ದುರ್ಬಲ ವರ್ಗದ ನೋವು ಅರಣ್ಯ ರೋಧನವಾಗಿದೆ.
ಇಷ್ಟು ವರ್ಷಗಳ ಕಾಲ ದೇಶವನ್ನು ಆಳಿದ ಸರಕಾರಗಳು ದಲಿತರ ಉದ್ಧಾರದ ಪೊಳ್ಳು ಮಾತುಗಳನ್ನಾಡಿವೆ ಮತ್ತು ದಲಿತರ ಹೆಸರಿನಲ್ಲಿ ಹಣ ಪೋಲು ಮಾಡಿವೆ. ಆದರೆ ಇಂದಿಗೂ ದಲಿತ ಸಮುದಾಯದ ಅನೇಕ ಮಂದಿ ಕನಿಷ್ಠ ಸೂರಿಲ್ಲದೆ ಜೀತದಾಳುಗಳಂತೆ ಉಳ್ಳವರ ಮನೆಯಲ್ಲಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಮುಂಬೈಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಗ್ರಂಥಾಲಯವನ್ನು ನಾಶಗೊಳಿಸುವ ಮೂಲಕ ದಲಿತರ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಗೋವುಗಳನ್ನು ರಕ್ಷಿಸುವ ನೆಪದಲ್ಲಿ ಗುಜರಾತ್‌ನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಬಿಎಸ್ಪಿ ವರಿಷ್ಠೆ ಮಾಯಾವತಿಯವರನ್ನು ಅವಹೇಳನ ಮಾಡುವ ಮೂಲಕ ದಲಿತ ಸಮೂಹಕ್ಕೆ ಅಗೌರವ ತೋರಿ ಹೀನಾಯವಾಗಿ ಕಾಣಲಾಗಿದೆ. ಗೋಸಂರಕ್ಷಣೆಯ ಹೆಸರಿನಲ್ಲಿ ಸಂಘಪರಿವಾರದ ಮಂದಿ ದಲಿತರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ. ಹರಿಯಾಣದ ರಾಜ್ಯದಲ್ಲಿ ಇಬ್ಬರು ದಲಿತ ಮಕ್ಕಳನ್ನು ಮನೆಗೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲಾಯಿತು. ಕೊಡಗಿನ ಕಣ್ಣಂಗಾಲ ಗ್ರಾಪಂ ಅಧ್ಯಕ್ಷೆ ಈಶ್ವರಿ ಅವರನ್ನು ಜೀತದಾಳುವಿನಂತೆ ದುಡಿಸಿಕೊಂಡು ದೌರ್ಜನ್ಯ ನಡೆಸಿರುವ ಪ್ರಕರಣ ಈ ಸಮಾಜದಲ್ಲಿ ದಲಿತರಿಗೆ ಎಷ್ಟು ಬೆಲೆ ಸಿಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಮಾದಾಪುರ ಕಾಲೇಜಿನ ಪ್ರಾಂಶುಪಾಲ ಸುದೇಶ್ ಮಂಗಳೂರು ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಹಲವು ತಿಂಗಳುಗಳೇ ಕಳೆದಿದ್ದರೂ ಯಾವುದೇ ತನಿಖೆಯನ್ನು ಕೈಗೊಂಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆಂದು ಬಿಡುಗಡೆಯಾಗುತ್ತಿರುವ ಅನುದಾನ ನಿರಂತರವಾಗಿ ದುರುಪಯೋಗವಾಗುತ್ತಿದೆ ಎಂದರು. ಹಾಗೂ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮನವಿ ಸ್ವೀಕರಿಸಿದ ಉಸ್ತುವಾರಿ ಸಚಿವರು: ಆ.15ರಂದು ಬೆಳಗ್ಗೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಜಿಲ್ಲೆಯಲ್ಲಿರುವ ದಲಿತರ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದ್ದು, ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ನಂತರ ದಲಿತ ಸಂಘರ್ಷ ಸಮಿತಿಯ ಪ್ರಮುಖರು ಪ್ರತಿಭಟನೆಯನ್ನು ಕೈಬಿಟ್ಟರು.
ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಸಂಘಟನಾ ಸಂಚಾಲಕರಾದ ಎಚ್.ಎ.ರವಿ, ಎಚ್.ಎ.ಐತ್ತಪ್ಪ, ಮಹಿಳಾ ಘಟಕದ ಸಂಘಟನಾ ಸಂಚಾಲಕಿ ಸಾವಿತ್ರಿ, ಬಹುಜನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೌರ್ಯ ಮತ್ತಿತರರು ಧರಣಿೆಯಲ್ಲಿ ಪಾಲ್ಗೊಂಡಿದ್ದರು.