ಉದ್ಯೋಗ ಮೇಳ, ಪ್ರವಾಸೋದ್ಯಮ ವೆಬ್‌ಸೈಟ್ ಅನಾವರಣ
ಕಾರವಾರ, ಆ.15: ನವೆಂಬರ್ 12ರಂದು ಕಾರವಾರದಲ್ಲಿ ನಡೆಯಲಿರುವ ಉದ್ಯೋಗ ಮೇಳದ ಮಾಹಿತಿ ಒದಗಿಸುವ ವೆಬ್‌ಸೈಟ್ ಹಾಗೂ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸೋಮವಾರ ಅನಾವರಣಗೊಳಿಸಿದರು.
www.karwarudyogmela.com
ನವೆಂಬರ್ 12ರಂದು ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, 100ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಲಿವೆ. ಉದ್ಯೋಗ ಮೇಳ ವೆಬ್‌ಸೈಟ್ ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಆ.20ರಿಂದ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ಅವರು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡುವ ಮೂಲಕ ನೋಂದಣಿ ಮಾಡಬೇಕು. ರಾಜ್ಯದ ಮಾತ್ರವಲ್ಲದೆ ನೆರೆಯ ಗೋವಾ, ಪುಣೆ, ಮುಂಬಯಿಗಳಿಂದ ಕೈಗಾರಿಕೋದ್ಯಮಗಳನ್ನು ಮೇಳದಲ್ಲಿ ಭಾಗವಹಿಸಲು ಆಹ್ವಾನಿಸಲಾಗುವುದು. ಕಂಪೆನಿಗಳಿಗೆ ಸಹ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದರು.
www.uttarakannadatourism.com
ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಸೇರಿದಂತೆ ಪ್ರವಾಸಿಗರಿಗೆ ಪ್ರವಾಸೋದ್ಯಮದ ಕುರಿತು ಸಮಗ್ರ ಮಾಹಿತಿಯನ್ನು ವೆಬ್‌ಸೈಟ್ ನಲ್ಲಿ ಪಡೆಯಬಹುದಾಗಿದೆ. ಪ್ರವಾಸಿಗರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು. ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.