ಟಿಪ್ಪು ಸುಲ್ತಾನ್ ಒಬ್ಬ ಅಪ್ಪಟ ದೇಶ ಭಕ್ತ: ಪುಟ್ಟಸ್ವಾಮಿ
ಸೊರಬ, ಆ. 15: ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟದ ಮಹಾನ್ ಸೇನಾನಿ ಹಾಗೂ ಒಬ್ಬ ಅಪ್ಪಟ ದೇಶ ಭಕ್ತರಾಗಿದ್ದರು ಎಂದು ವಕೀಲ ವೈ.ಜಿ. ಪುಟ್ಟಸ್ವಾಮಿ ನುಡಿದರು.
ಪಟ್ಟಣದಲ್ಲಿ ಹಝ್ರತ್ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ 70ನೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಟಿಪ್ಪು ಸುಲ್ತಾನ್ ತಮ್ಮ ಆಡಳಿತಾವಧಿಯಲ್ಲಿ ಜಾತಿ ಭೇದವಿಲ್ಲದೆ ಎಲ್ಲರನ್ನೂ ಸರಿಸಮಾನರಾಗಿ ಕಾಣುತ್ತಿದ್ದರು. ಅವರು ಮಾಡಿದ ಉತ್ತಮ ಕಾರ್ಯಗಳನ್ನು ತಿಳಿಯಲು ಇತಿಹಾಸದ ಅಧ್ಯಯನದಿಂದ ಸಾಧ್ಯವಾಗುತ್ತದೆ. ಇತಿಹಾಸ ಅರಿಯದವರು ಕೇವಲ ರಾಜಕೀಯ ದುರುದ್ದೇಶದಿಂದ ಗೋಹತ್ಯೆ ಹೆಸರಿನಲ್ಲಿ ಅಮಾಯಕ ಮುಸ್ಲಿಮ್ ಸಮುದಾಯ ಹಾಗೂ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ.ಗೋಸಂರಕ್ಷಣೆಯಲ್ಲಿ ತೊಡಗಿರುವ ಇಡೀ ಕುಟುಂಬವೇ ಮಹಾರಾಷ್ಟ್ರದಲ್ಲಿರುವುದು ಮಾಧ್ಯಮದ ಮೂಲಕ ತಿಳಿದು ಬಂದಿದೆ. ಇದಕ್ಕಿಂತ ಉತ್ತಮ ಉದಾಹರಣೆ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಯಾರೋ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ದೂರುವುದು ಉತ್ತಮ ಬೆಳವಣಿಗೆಯಲ್ಲ ಎಂದ ಅವರು, ಅನೇಕ ಮುಸ್ಲಿಮ್ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ಮಖ್ಬೂಲ್ ಅಹ್ಮದ್, ಪದಾಧಿಕಾರಿಗಳಾದ ಝಾಫಿರ್ ಅಹ್ಮದ್, ಯು. ಮುಬಾರಿಸ್, ಅಕ್ರಂ, ಬಿಲಾಲ್, ಇಬ್ರಾಹೀಂ, ಯಾಸೀನ್, ಪಪಂ ಸದಸ್ಯ ಸುಜಾಯತ್‌ವುಲ್ಲಾ ಪ್ರಮುಖರಾದ ಶುಂಠಿ ಮೋಹನ್, ಸೈಯದ್ ಅತಿಕ್, ಯು. ಫಯಾಝ್ ಅಹ್ಮದ್, ಎನ್.ನೂರ್ ಅಹ್ಮದ್, ಸೈಯದ್ ವಹಬೂಬ್, ಯು.ಎಸ್.ಬುರ್ಹಾನ್, ಸೈಯದ್ ಶಾಹಿದ್,ಟಿ. ವಝೀರ್ ಮತ್ತಿತರರು ಉಪಸ್ಥಿತರಿದ್ದರು.