×
Ad

70ನೆ ಸ್ವಾತಂತ್ರೋತ್ಸವ ಸಂಭ್ರಮ

Update: 2016-08-15 22:28 IST

  ಶಿವಮೊಗ್ಗ, ಆ. 15: ಮಹಾತ್ಮರ ಆಶಯದಂತೆ, ಅವರ ಆದರ್ಶ ಮೈಗೂಡಿಸಿಕೊಂಡು ಸ್ವತಂತ್ರ ಭಾರತದ ಹಿರಿಮೆ-ಗರಿಮೆ ಉತ್ತುಂಗಕ್ಕೇರಿಸಲು ಶ್ರಮಿಸಬೇಕು. ಈ ಮೂಲಕ ದೇಶವನ್ನು ಮತ್ತಷ್ಟು ಸಮೃದ್ಧಗೊಳಿಸಲು ನಾವೆಲ್ಲರೂ ಸಂಕಲ್ಪಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪಕರೆ ನೀಡಿದ್ದಾರೆ. ನಗರದ ಡಿ. ಆರ್. ಆರ್ ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 70ನೆ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಬಳಿಕ ನಾಗರಿಕರನ್ನುದ್ದೇಶಿಸಿ ಅವರು ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಸ್ವಾತಂತ್ರ ಸ್ವೇಚ್ಛೆಯಲ್ಲ ಎಂಬುದನ್ನು ಮರೆಯಬಾರದು. ನಮ್ಮ ಹಿರಿಯರು ಮಾಡಿದ ಹೋರಾಟಗಳು, ಪ್ರಾಣತ್ಯಾಗ, ಬಲಿದಾನಗಳಿಂದ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆ. ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರವರ ಆಶಯಕ್ಕೆ ತಕ್ಕಂತೆ ಸಮಾನತೆ, ಧರ್ಮ ನಿರಪೇಕ್ಷತೆ ಮತ್ತು ಸಾಮಾಜಿಕ ನ್ಯಾಯಗಳನ್ನು ಎತ್ತಿಹಿಡಿಯಬೇಕಾಗಿದೆ ಎಂದರು. ಅಭಿವೃದ್ಧಿಯತ್ತ ದೇಶ: ಸ್ವಾತಂತ್ರಪೂರ್ವ ಸಂದಭರ್ದಲ್ಲಿ ಅನಕ್ಷರತೆ, ಬಡತನ, ನಿರುದ್ಯೋಗ ಮುಂತಾದ ಹಲವಾರು ಸಮಸ್ಯೆಗಳನ್ನು ದೇಶ ಅನುಭವಿಸಬೇಕಾಯಿತು. ಸ್ವಾತಂತ್ರಾ ನಂತರ 69 ವರ್ಷಗಳ ತರುವಾಯ ಭಾರತ ಬೃಹತ್ ಸ್ವಾಭಿಮಾನಿ ರಾಷ್ಟ್ರವಾಗಿ ಬೆಳೆದಿದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ದೇಶದ ಭದ್ರತೆ ದೃಷ್ಟಿಯಿಂದಲೂ ಭಾರತೀಯ ಭೂ ಸೇನೆ, ವಾಯು ಸೇನೆ, ನೌಕಾ ಸೇನೆ ಪ್ರಬಲಶಕ್ತಿಯಾಗಿವೆ. ಇದರೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲೂ ಭಾರತ ಪ್ರಬಲ ಶಕ್ತಿಯಾಗಿ ಬೆಳೆದಿದೆ ಎಂದರು. ರಾಜ್ಯದಲ್ಲಿಯೂ ಬದಲಾವಣೆ: ದೇಶದಲ್ಲಾಗಿರುವ ಬದಲಾವಣೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ಕರ್ನಾಟಕ ರಾಜ್ಯ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ. ಹಲವಾರು ಜನಪರ ಐತಿಹಾಸಿಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ರಾಜ್ಯವು ದೇಶದಲ್ಲಿಯೇ ಅಗ್ರಸ್ಥಾನ ಕಾಯ್ದುಕೊಂಡಿದೆ. ಹಸಿವು ಮುಕ್ತ ಕರ್ನಾಟಕ ಘೋಷಣೆಯೊಂದಿಗೆ ಉಚಿತ ಅಕ್ಕಿ ಆಹಾರಧಾನ್ಯ ವಿತರಿಸುವ ಮಹತ್ವದ ‘ಅನ್ನಭಾಗ್ಯ’ ಯೋಜನೆಯನ್ನು ಸರಕಾರ ಜಾರಿಗೊಳಿಸಿದೆ.

ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ ಹಾಗು ಅಲ್ಪಸಂಖ್ಯಾತ ನಿಗಮಗಳಲ್ಲಿ ಫಲಾನುಭವಿಗಳ ಸಾಲ ಮನ್ನಾ ಮಾಡಲಾಗಿದೆ. ದುರ್ಬಲರ ಮನೆ ನಿರ್ಮಾಣದ ಕನಸು ನನಸಾಗಿಸಲು ವಸತಿಭಾಗ್ಯ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಕ್ಷೀರಧಾರೆ, ಬಡತನ ರೇಖೆಗಿಂತ ಕೆಳಗಿನವರಿಗೆ ಆರೋಗ್ಯ ರಕ್ಷಣೆಗಾಗಿ ರಾಜೀವ್ ಆರೋಗ್ಯ ಭಾಗ್ಯ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ವಸತಿ ಕಲ್ಪಿಸಲು ವಿದ್ಯಾಸಿರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ ಎಂದರು. ಜಿಲ್ಲೆಯ ಪ್ರಗತಿ:

ಶಿವಮೊಗ್ಗ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಭೂ ಅಭಿವೃದ್ಧಿ, ಕುರಿ, ದನದ ಕೊಟ್ಟಿಗೆ ನಿರ್ಮಾಣ, ತೋಟಗಾರಿಕೆ ಪ್ರದೇಶ ಅಭಿವೃದ್ಧಿ ಕಾಮಗಾರಿಗಳಿಗಾಗಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 61, 13, 553 ಮಾನವ ದಿನಗಳನ್ನು ಸೃಜಿಸಿ, 172 ಕೋಟಿ ರೂ. ಪ್ರಗತಿ ಸಾಧಿಸಲಾಗಿದೆ ಎಂದರು.
 

ಅಕ್ರಮ -ಸಕ್ರಮಕ್ಕೆ ಆದೇಶ:

ಸರಕಾರಿ ಭೂಮಿಯಲ್ಲಿ ನಿರ್ಮಿಸಿರುವ ಮನೆಗಳ ಸಕ್ರಮಕ್ಕೆ ಗ್ರಾಮಾಂತರ ಪ್ರದೇಶದಲ್ಲಿ 94 ಸಿ ಅಡಿಯಲ್ಲಿ ಹಾಗೂ ನಗರದ ಪ್ರದೇಶದಲ್ಲಿ 94 ಸಿ ಸಿ ಅಡಿಯಲ್ಲಿ ಈಗಾಗಲೇ ಆದೇಶ ಹೊರಡಿ ಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಈ ಸಮಸ್ಯೆ ಬಗೆಹರಿಸಲು ಸಂಕಲ್ಪ ಮಾಡಲಾಗಿದೆ ಎಂದು ಸಚಿವ ಕಾಗೋಡು ತಿಳಿಸಿದರು.

ನೇಗಿಲ ಯೋಗಿಯ ಹಿತರಕ್ಷಣೆಗೆ ಬದ್ದ:

ರಾಜ್ಯ ಸರಕಾರ ರೈತರ ಪರವಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ನೇಗಿಲ ಯೋಗಿಯ ಹಿತಕಾಯಲು ಸರಕಾರ ಬದ್ಧವಾಗಿದೆ ಎಂದ ಸಚಿವರು, ಅಕಾಲಿಕ ಮಳೆ, ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪಗಳು ಸಾಂಪ್ರದಾಯಿಕ ಕೃಷಿಯ ಮೇಲೆ ಪರಿಣಾಮ ಬೀರಿದಾಗ ರೈತರ ನೆರವಿಗೆ ಸರಕಾರ ಕಂಕಣಬದ್ಧವಾಗಿ ನಿಂತಿದೆ. ಬಿತ್ತನೆ ಬೀಜಗಳು, ರಸಗೊಬ್ಬರ, ಕೃಷಿ ಉಪಕರಣಗಳಿಗೆ ಸಹಾಯಧನ ನೀಡುವಂತಹ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸಚಿವ ಕಾಗೋಡು ತಿಳಿಸಿದರು.

ಭಾಷಣದ ನಡುವೆ ಅಸ್ವಸ್ಥಗೊಂಡ ಸಚಿವ:

ಶಿವಮೊಗ್ಗ: ಸ್ವಾತಂತ್ರ್ಯೋತ್ಸವದ ಭಾಷಣ ಮಾಡುತ್ತಿದ್ದ ವೇಳೆಯೇ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ತೀವ್ರ ಅಸ್ವಸ್ಥ ಗೊಂಡು, ಅರ್ಧಕ್ಕೇ ಭಾಷಣ ಮೊಟಕುಗೊಳಿಸಿದ ಘಟನೆ ಸೋಮವಾರ ನಗರದ ಡಿ.ಎ.ಆರ್ ಮೈದಾನದಲ್ಲಿ ನಡೆಯಿತು. ತಕ್ಷಣವೇ ಅವರನ್ನು ಖಾಸಗಿ ನಾರಾ ಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಏನಾಯ್ತು?:

ಕಾಗೋಡು ತಿಮ್ಮಪ್ಪಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು. ಬಳಿಕ ನಾಗರಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಏಕಾಏಕಿ ನಿಯಂತ್ರಣ ಕಳೆದುಕೊಂಡು ಕುಸಿದು ಬೀಳುವ ಸ್ಥಿತಿಗೆ ತಲುಪಿದರು. ಇದನ್ನು ಗಮನಿಸಿದ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪರವರು ತಕ್ಷಣ ಸಚಿವರ ರಕ್ಷಣೆಗೆ ಧಾವಿಸಿದರು. ಕುಸಿದು ಬೀಳದಂತೆ ಹಿಡಿದುಕೊಂಡರು. ತದನಂತರ ಅವರನ್ನು ಸುರಕ್ಷಿತವಾಗಿ ವಾಹನವೊಂದರಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗೊಂದಲ: ಏಕಾಏಕಿ ಸಚಿ ರು ಅಸ್ವಸ್ಥಗೊಂಡ ಕಾರಣ ಕಾರ್ಯಕ್ರಮದಲ್ಲಿಗೊಂದಲ ಮೂಡಿಸಿದ್ದು, ಬಳಿಕ ಆರೋಗ್ಯ ಸ್ಥಿರ ವಾಗಿರುವ ಮಾಹಿತಿ ಬಂದ ಬಳಿಕ ಕಾರ್ಯಕ್ರಮ ಮುಂದುವರಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News