ಸಂಭ್ರಮದಿಂದ ಜರಗಿದ 70ನೆ ಸ್ವಾತಂತ್ರೋತ್ಸವ
ಮೂಡಿಗೆರೆ, ಆ.15 : ಮನೆಯ ಮುಂದೆ ಶುಚಿತ್ವ ಕಾಪಾಡಿಕೊಂಡಲ್ಲಿ ಆರೋಗ್ಯ ವೃದ್ಧಿ ಸಾಧ್ಯ ಎಂದು ಗೋಣಿಬೀಡು ಗ್ರಾಪಂ ಸದಸ್ಯ ಜೆ.ಎಸ್.ಸುಧೀರ್ ಜನ್ನಾಪುರ ತಿಳಿಸಿದರು.
ತಾಲೂಕಿನ ಗೋಣಿಬೀಡು ಗ್ರಾಪಂ ಆಡಳಿತದಿಂದ 70ನೆ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಯೋಜನೆಗಳಲ್ಲೊಂದಾದ ಸ್ವಚ್ಛತಾ ಅಭಿಯಾನದ ಅಂಗವಾಗಿ ಆಟೊ ರಿಕ್ಷಾವನ್ನು ಗ್ರಾಮದ ಸ್ವಚ್ಛತೆಗೆ ನೀಡುತ್ತಿದ್ದು, ಸಾರ್ವಜನಿಕರು ಮತ್ತು ಗ್ರಾಮಸ್ಥರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡುವಂತೆ ಮನವಿಗೊಂಡರು.
ಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷೆ ಭಾರತಿ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರ ಸ್ಮರಣೆ ಅವಶ್ಯ. ಇಂತಹವರನ್ನು ಸ್ಮರಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಜಾತಿ, ಮತ-ಪಂಥಗಳನ್ನು ಬಿಟ್ಟು ರಾಷ್ಟ್ರ ರಕ್ಷಣೆಗೆ ಮುಂದಾಗಬೇಕೆಂದರು. ಸ್ವಾತಂತ್ರವೆಂದರೆ ಸ್ವೇಚ್ಛಾಚಾರವಲ್ಲ. ಇನ್ನೊಬ್ಬರ ಹಕ್ಕಿಗೆ ಧಕ್ಕೆಯಾಗದಂತೆ ನಮ್ಮ ಹಕ್ಕನ್ನು ಮಾತ್ರ ಪಡೆದು ಬದುಕುವುದೇ ಸ್ವಾತಂತ್ರ ಎಂದು ಜನತೆಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಯಶೋದ, ಸದಸ್ಯರಾದ ವರದೇಗೌಡ, ಹೊನ್ನಮ್ಮ, ಜಯಮ್ಮ, ಜಿ.ಎಸ್.ದಿನೇಶ್, ರಾಮಚಂದ್ರ, ಲಲಿತಾ, ಮಾಜಿ ಪ್ರಧಾನ ಕೆ.ಟಿ.ಜಗದೀಶ್, ಹೊಯ್ಸಳ ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಕೃಷ್ಣಮೂರ್ತಿ, ವ್ಯವಸಾಯೋತ್ಪನ್ನ ಸಹಕಾರ ಬ್ಯಾಂಕಿನ ಅಧ್ಯಕ್ಷ ಜೈರಾಂ, ರೋಟರಿ ಅಧ್ಯಕ್ಷ ಡಿ.ಎಂ.ಶೈಲೇಶ್, ಕಸಾಪದ ಹೋಬಳಿ ಅಧ್ಯಕ್ಷ ಎಂ.ಬಿ.ಸಂದೀಪ್, ಜೇಸಿ ಸಂಸ್ಥೆಯ ಅಧ್ಯಕ್ಷ ಗಣೇಶ್, ಗೋಣಿಬೀಡು ವ್ಯವಸಾಯೋತ್ಪನ್ನ ಸಹಕಾರ ಬ್ಯಾಂಕಿನ ಕಾರ್ಯ ನಿರ್ವಹಣಾಧಿಕಾರಿ ಎಂ.ಡಿ.ಲಲಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದಕ್ಕು ಮುನ್ನಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿ ಗ್ರಾಪಂ ಆವರಣವನ್ನು ತಲುಪಿತು.