ರಾಷ್ಟ್ರಪ್ರೇಮ, ರಾಷ್ಟ್ರಗೌರವ ಪ್ರತಿಯೊಬ್ಬರಲ್ಲೂ ಮೂಡಬೇಕು: ತಹಶೀಲ್ದಾರ್ ಎಂ. ಭಾಗ್ಯಾ
ಕಡೂರು, ಆ. 15: ಯುವ ಪೀಳಿಗೆಗೆ ಅಕ್ಷರ ಜ್ಞ್ಞಾನ ಕಲಿಸಿದರೆ ಸಾಲದು, ಅವರನ್ನು ಸಂಸ್ಕಾರಯುತರನ್ನಾಗಿ ರೂಪಿಸಬೇಕು ಎಂದು ತಹಶೀಲ್ದಾರ್ ಎಂ. ಭಾಗ್ಯಾ ಹೇಳಿದರು.
ಅವರು ಸೋಮವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ 70ನೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರಾಷ್ಟ್ರಪ್ರೇಮ, ರಾಷ್ಟ್ರಗೌರವ ಪ್ರತಿಯೊಬ್ಬರಲ್ಲೂ ಮೂಡಬೇಕು. ರಾಷ್ಟ್ರಗೀತೆ ಮತ್ತು ರಾಷ್ಟ್ರ ಲಾಂಛನಗಳಿಗೆ ಪ್ರತಿಯೊಬ್ಬರು ಗೌರವ ನೀಡುವುದನ್ನು ಬೆಳಸಿಕೊಳ್ಳಬೇಕು, ಪ್ರತಿಭೆಗಳ ಪಲಾಯನವಾಗಬಾರದು ಎಂದರು.
ಯುವ ಪೀಳಿಗೆಯು ಇಂದು ನಿರಾಶೆ ಮತ್ತು ಹತಾಶೆಯ ಅಂಚಿನಲ್ಲಿದೆ. ಅಲ್ಪಸಂಖ್ಯಾತರು ಭೀತಿಯ ಸಂಕೋಲೆಯಿಂದ ಹೊರಬರಬೇಕಾಗಿದೆ. ಭಾರತ ಸರ್ವ ಧರ್ಮಗಳನ್ನು ಸಮಭಾವದಿಂದ ಕಾಣುವ ರಾಷ್ಟ್ರವಾಗಿದೆ ಎಂದು ಹೇಳಿದರು.
ಸರಕಾರದಿಂದ ಎಲ್ಲವನ್ನೂ ನಿರೀಕ್ಷೆ ಮಾಡಬಾರದು. ತಮ್ಮ ಸ್ವಂತ ಶಕ್ತಿಯಿಂದ ಮೇಲೆ ಬರಲು ಪ್ರಯತ್ನಿಸಬೇಕು ಎಂದ ಅವರು, ಕೈಗಾರಿಕೀಕರಣ ಮತ್ತು ಆಕಾಂಕ್ಷೆಗಳ ಪೂರೈಕೆಗಾಗಿ ಪರಿಸರವನ್ನು ಹಾಳು ಮಾಡುತ್ತಿರುವುದು ವಿಷಾದನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ಮುಂಗಾರು ಮಳೆ ತಾಲೂಕಿನಲ್ಲಿ ಮತ್ತೆ ಕೈಕೊಟ್ಟಿದೆ. ಪದೇ ಪದೇ ಬರಗಾಲ ಕ್ಷೇತ್ರವನ್ನು ಕಾಡುತ್ತಿದೆ. ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಯೋಜನೆಗಳಿಗೆ ಇದೀಗ ಚಾಲನೆ ನೀಡಲಾಗುತ್ತಿದೆ ಎಂದರು.
ಸ್ವಾತಂತ್ರ್ಯ ದಿನಾಚರಣೆಯ ಈ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಆದರೆ ನಾಡಗೀತೆ, ರಾಷ್ಟ್ರಗೀತೆ ಹಾಡುವಾಗ ಗೌರವ ಸೂಚಿಸುವ ಕೆಲಸವನ್ನು ಮಕ್ಕಳು ಮಾಡಬೇಕು. ಇದಕ್ಕಾಗಿ ಪೋಷಕರು ಮತ್ತು ದೈಹಿಕ ಶಿಕ್ಷಕರು ಅವರಿಗೆ ತಿಳಿಹೇಳಬೇಕು ಎಂದರು.
ಈ ಸಂದರ್ಭ ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್, ಪುರಸಭಾ ಅಧ್ಯಕ್ಷೆ ಅನಿತಾರಾಜ್‌ಕುಮಾರ್, ವೃತ್ತ ನಿರೀಕ್ಷಕ ಕೆ. ಸತ್ಯನಾರಾಯಣ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ, ತಾಲೂಕು ವೈದ್ಯಾಧಿಕಾರಿ ಡಾ. ಪ್ರಭು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಶ್ರೀಕಂಠೇಶ್ವರ ಸ್ವಾಗತಿಸಿದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಅಗ್ನಿ ಶಾಮಕ ಇಲಾಖೆಯಿಂದ ಬೆಂಕಿನಂದಿಸುವ ಪ್ರಾತ್ಯಕ್ಷಿತೆ ನಡೆಯಿತು.
‘ಬಡತನ,ಅನಕ್ಷರತೆ