ಹಿರಿಯ ಮುತ್ಸದ್ದಿ ಬಿ. ಎ. ಮೊಯ್ದಿನ್ ಅವರಿಗೆ ದೇವರಾಜ ಅರಸು ರಾಜ್ಯ ಪ್ರಶಸ್ತಿ

Update: 2016-08-16 14:49 GMT

ಬೆಂಗಳೂರು, ಆ. 16: ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಯ್ದಿನ್ ಅವರನ್ನು ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಡಿ.ದೇವರಾಜ ಅರಸು ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಿ.ಎ.ಮೊಯ್ದಿನ್ ಅವರು, ಹತ್ತು-ಹಲವು ಸುಧಾರಣೆಗಳನ್ನು ತರುವ ಮೂಲಕ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದರು. ಆ ಹಿನ್ನೆಲೆಯಲ್ಲಿ ಅವರ ಸಾಮಾಜಿಕ, ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಸರಕಾರ ಪ್ರಸಕ್ತ ಸಾಲಿನ ದೇವರಾಜ ಅರಸು ಪ್ರಶಸ್ತಿಯನ್ನು ಬಿ.ಎ.ಮೊಯ್ದಿನ್ ಅವರಿಗೆ ಪ್ರಕಟಿಸಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.

1938ರ ಮೇ 5ರಂದು ದ.ಕ. ಜಿಲ್ಲೆಯ ಬಜ್ಪೆಯಲ್ಲಿ ಅಬ್ದುಲ್ ಖಾದರ್ ಮತ್ತು ಹಲೀಮಾ ದಂಪತಿಗೆ ಜನಿಸಿದ ಮೊಯ್ದೀನ್ ಅವರು, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪದವಿ ಪಡೆದರು. 

1969ರಲ್ಲಿ ಕಾಂಗ್ರೆಸ್ ಸೇರಿದ ಮೊಯ್ದಿನ್ 1978ರಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 1995ರಲ್ಲಿ ಜೆ.ಎಚ್. ಪಟೇಲ್ ಸಂಪುಟದಲ್ಲಿ ಉನ್ನತ ಶಿಕ್ಷಣ ಮತ್ತು ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜನಪರ ಜನಪ್ರತಿನಿಧಿ, ದಕ್ಷ ಆಡಳಿತಗಾರ, ಕಳಂಕರಹಿತ ರಾಜಕಾರಣಿಯಾಗಿರುವ ಮೊಯ್ದಿನ್ ಅವರು, ತನ್ನ ರಾಜಕೀಯ ಬದುಕನ್ನು ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮುಡಿಪಾಗಿಟ್ಟು ಶ್ರಮಿಸಿದ ನೇತಾರರಾಗಿದ್ದಾರೆ.

ಮೊಯ್ದಿನ್ ಅವರ ಪ್ರಾಮಾಣಿಕತೆ, ಜಾತ್ಯತೀತ ಸೇವೆಯನ್ನು ಪರಿಗಣಿಸಿ ದೇವರಾಜ ಅರಸು ಅವರ ಶತಮಾನೋತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಅರ್ಹ ವ್ಯಕ್ತಿಗೆ ಸಂದಂತಾಗಿದೆ.

ಆ.20ರಂದು ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 101ನೆ ಜನ್ಮ ದಿನಾಚರಣೆ ಹಾಗೂ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News