ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನ: ಚಂದ್ರಕಾಂತ್
ಚಿಕ್ಕಮಗಳೂರು, ಆ.16: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುತ್ತದೆ ಎಂದು ಮೂಡಿಗೆರೆ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಚ್‌ಸಿ.ಚಂದ್ರಕಾಂತ್ ಹಳಸೆ ಅಭಿಪ್ರಾಯಿಸಿದ್ದಾರೆ.
ಸ್ವಾತಂತ್ರೋತ್ಸವದ ಅಂಗವಾಗಿ ಬೆಟ್ಟಗೆರೆ ನಿಂಗಮ್ಮ ಬೊಮ್ಮಯ್ಯ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳು ಮತ್ತು ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅವಕಾಶಗಳನ್ನು ಕಳೆದುಕೊಂಡರೆ ಮುಂದೆ ಪಶ್ಚಾತ್ತಾಪಪಡಬೇಕಾಗುತ್ತದೆ. ಸೋಲಿನ ಭಯದಿಂದ ಯಾವುದೇ ಚಟುವಟಿಕೆ ಅಥವಾ ಸ್ಪರ್ಧೆಯಲ್ಲಿ ಭಾಗವಹಿಸಲು ಹಿಂಜರಿಕೆ ವ್ಯಕ್ತಪಡಿಸುವ ಮನೋಭಾವನೆ ಎದ್ದು ಕಾಣುತ್ತಿದ್ದು, ಇದನ್ನು ತೊಡೆದು ಹಾಕಿ ಎಲ್ಲ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು ಎಂದರು. ಶಾಲಾ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವನೆ ಬೆಳೆಸಬೇಕು. ಪ್ರತಿಯೊಂದು ವಿಷಯಗಳನ್ನು ವಿಮರ್ಶಿಸಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಟ್ಟಗೆರೆ ಗ್ರಾಪಂ ಅಧ್ಯಕ್ಷ ಬಿ.ಕೆ.ದಿನೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ಕೀಳರಿಮೆಯಿಂದ ಹೊರಬರಬೇಕು. ಉತ್ತಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಮೈಗೂಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಮಹಾವೀರ ಜೈನ್ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಸದಸ್ಯ ಜಯಪಾಲಗೌಡ, ಮುಖಂಡ ದೇವದಾಸ ಗೌಡ ಮತ್ತು ಬಿ.ಎ. ಯತೀಶ್ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಲಯನ್ಸ್ ವತಿಯಿಂದ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡಿ.ಕೆ. ಲಕ್ಷ್ಮಣಗೌಡ, ಪ್ರಭಾರಿ ಮುಖ್ಯ ಶಿಕ್ಷಕ ಚಂದ್ರಪ್ಪ ಉಪಸ್ಥಿತರಿದ್ದರು. ಶಿಕ್ಷಕ ಶ್ರೀನಿವಾಸ್ ನಿರೂಪಿಸಿ, ಕೇಶವ್ ವಂದಿಸಿದರು.