×
Ad

ಸಾರ್ವಜನಿಕರ ಅಹವಾಲುಗಳನ್ನು ಕಾಲಮಿತಿಯೊಳಗೆ ಪರಿಹರಿಸಿ: ಸಚಿವ ಆರ್.ವಿ.ದೇಶಪಾಂಡೆ

Update: 2016-08-16 21:58 IST

ಕಾರವಾರ, ಆ.16: ಸಾರ್ವಜನಿಕರ ಅಹವಾಲುಗಳನ್ನು ಕಾಯ್ದೆ ಕಾನೂನು ವ್ಯಾಪ್ತಿಯಲ್ಲಿ ಕಾಲಮಿತಿಯ ಒಳಗಾಗಿ ಬಗೆಹರಿಸಬೇಕು ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಅವರು ಮಂಗಳವಾರ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ಜನರಿಂದ ನೇರವಾಗಿ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಇದಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಈ ರೀತಿಯ ಜನಸ್ಪಂದನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಕಚೇರಿಗೆ ಬರುವ ಸಾರ್ವಜನಿಕರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಅಹವಾಲು ಆಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

247 ಅರ್ಜಿ ಸ್ವೀಕಾರ: ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 247 ಅರ್ಜಿಗಳನ್ನು ಸ್ವೀಕರಿಸಿ, ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 142 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಕಾರ್ಯಕ್ರಮದಲ್ಲಿ 105 ಮಂದಿ ಅಹವಾಲು ಸಲ್ಲಿಸಿದರು. ಅಹವಾಲುಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ವೇದಿಕೆ ಮುಂಭಾಗಕ್ಕೆ ಆಗಮಿಸಿ ಕೈಗೊಂಡ ಕ್ರಮಗಳ ವಿವರ ಒದಗಿಸಲು ವ್ಯವಸ್ಥೆ ಮಾಡಲಾಗಿತ್ತು.

ಅರ್ಜಿಗಳ ಮಹಾಪೂರ: ಅತಿಕ್ರಮಣ ತೆರವು, ರಸ್ತೆ ಅಭಿವೃದ್ಧಿ, ಉದ್ಯೋಗಾವಕಾಶ ಸೃಷ್ಟಿ, ಡೆಂಗ್ ರೋಗ ನಿಯಂತ್ರಣ, ಶಿಕ್ಷಕರ ಕೊರತೆ, ಮನಸ್ವಿನಿ ಯೋಜನೆಯಡಿ ನೆರವು, ಮೂಲ ಸೌಕರ್ಯ ಬೇಡಿಕೆ, ಕಳ್ಳತನ ನಿಯಂತ್ರಣಕ್ಕೆ ಮನವಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಾರ್ವಜನಿಕರು ಮಂಡಿಸಿದರು.

ಮನೆಗೆ ಭೇಟಿ ನೀಡಿ : 40 ವರ್ಷ ಮೀರಿರುವ ತನ್ನ ಅನಾರೋಗ್ಯ ಪೀಡಿತ ಮಗಳಿಗೆ ಮನಸ್ವಿನಿ ಯೋಜನೆಯಡಿ ನೆರವು ನೀಡುವಂತೆ ನಂದನಗದ್ದಾ ನಿವಾಸಿಯ ಮನವಿಗೆ ಸ್ಪಂದಿಸಿದ ಸಚಿವರು, ನಾಳೆ ಸಂಬಂಧಪಟ್ಟ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಒಂದು ವಾರದ ಒಳಗಾಗಿ ಸೌಲಭ್ಯ ಒದಗಿಸುವಂತೆ ಕಾರವಾರ ತಹಶೀಲ್ದಾರ್‌ರಿಗೆ ಸೂಚನೆ ನೀಡಿದರು.

ಕಾರವಾರ ನ್ಯೂ ಕೆಎಚ್‌ಬಿ ಕಾಲನಿಯಿಂದ ಸರಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಅತಿಕ್ರಮಣವಾಗಿದ್ದು, ತೆರವುಗೊಳಿಸುವಂತೆ ಸ್ಥಳೀಯ ನಾಗರಿಕರು ಮನವಿ ಸಲ್ಲಿಸಿದರು. ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸಚಿವರು ನಗರಸಭೆ ಇಂಜಿನಿಯರ್‌ಗೆ ಆದೇಶಿಸಿದರು. ಸಿದ್ಧರ ಗ್ರಾಮದಲ್ಲಿ ದೊಡ್ಡ ಹೊಳೆಯಿಂದಾಗಿ ಕೃಷಿ ಭೂಮಿ ಕೊಚ್ಚಿಹೋಗಿದ್ದು, ಪ್ರವಾಹ ತಡೆಗೋಡೆ ನಿರ್ಮಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಈ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಲು ತಿಳಿಸಿದರು.

ಎಂಟನೆ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುತ್ತಿರುವ ಶಾಲೆಗಳಲ್ಲಿ 9 ಹಾಗೂ 10 ನೆ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ಮುಂದುವರಿಸಬೇಕು. ಶಿಕ್ಷಕರು ಲಭ್ಯವಿಲ್ಲದಿದ್ದರೆ ಅತಿಥಿ ಶಿಕ್ಷಕರನ್ನು ನೇಮಕ ಮಾಡುವಂತೆ ಸಚಿವರು ತಿಳಿಸಿದರು. ಟ್ರಾಕ್ಟರ್ ಚಲಾಯಿಸುವ ವೇಳೆ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ಸತೀಶ ನಾಯ್ಕ ಎಂಬವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚುವರಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು. ವಿವಿಧ ಫಲಾನುಭವಿಗಳಿಗೆ ಸಚಿವರು ಈ ಸಂದರ್ಭದಲ್ಲಿ ವಿವಿಧ ಸೌಲಭ್ಯಗಳನ್ನು ವಿತರಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ಸತೀಶ ಸೈಲ್, ಮಂಕಾಳು ವೈದ್ಯ, ಶಿವರಾಮ ಹೆಬ್ಬಾರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ವಂಶಿಕೃಷ್ಣ , ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News