ನಾಡ ಕಚೇರಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ
ಶಿವಮೊಗ್ಗ, ಆ.16: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿರುವ ನಾಡ ಕಚೇರಿಗೆ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿಯವರು ಮಂಗಳವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ನಡೆಯಿತು. ಈ ವೇಳೆ ಕಚೇರಿಗೆ ವಿವಿಧ ಕೆಲಸ-ಕಾರ್ಯಗಳಿಗೆ ಆಗಮಿಸಿದ್ದ ನಾಗರಿಕರು, ಕಚೇರಿಯಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಅಹವಾಲು ತೋಡಿಕೊಂಡರು. ದೂರುಗಳ ಸರಮಾಲೆಯನ್ನೇ ಮುಂದಿಟ್ಟರು. ಆರ್‌ಟಿಸಿಯಲ್ಲಿ ಬೆಳೆ ಮಾಹಿತಿ ಸರಿಯಾಗಿ ಬರುತ್ತಿಲ್ಲ. ಜಮೀನುಗಳಲ್ಲಿ ಬೆಳೆ ಬೆಳೆಯುತ್ತಿದ್ದರೂ ಬೆಳೆ ಬೆಳೆಯುತ್ತಿಲ್ಲವೆಂಬ ಮಾಹಿತಿ ಆರ್‌ಟಿಸಿಯಲ್ಲಿ ಮುದ್ರಿತವಾಗುತ್ತಿದೆ. ಇದರಿಂದ ವಿವಿಧ ರೀತಿಯ ಸಮಸ್ಯೆ ಎದುರಿಸುವಂತಾಗಿದೆ. ಕೆರೆ, ಸರಕಾರಿ ಭೂಮಿ ಒತ್ತುವರಿ ಮಾಡಲಾಗಿದೆ. ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೂ ತೆರವುಗೊಳಿಸಿಲ್ಲ. ಸರ್ವೇ ನಡೆಸುವ ಕೆಲಸ ಕೂಡ ಮಾಡಿಲ್ಲ ಎಂದು ಕೆಲ ನಾಗರಿಕರು, ರೈತರು ಡಿ.ಸಿ.ಯವರ ಬಳಿ ತಮ್ಮ ಅಳಲು ತೋಡಿಕೊಂಡರು.
ಕ್ರಮದ ಎಚ್ಚರಿಕೆ:
ಯಾವುದೇ ಗೊಂದಲಕ್ಕೆ ಆಸ್ಪದವಾಗದ ರೀತಿಯಲ್ಲಿ ಕಚೇರಿಗೆ ಆಗಮಿಸುವ ನಾಗರಿಕರ ಕೆಲಸ ಕಾರ್ಯಗಳನ್ನು ಕಾಲಮಿತಿಯಲ್ಲಿ ಮಾಡಿಕೊಡಿ. ಆರ್‌ಟಿಸಿಯಲ್ಲಾಗುತ್ತಿರುವ ದೋಷ ಸರಿಪಡಿಸಿ. ಮುಂದಿನ ದಿನಗಳಲ್ಲಿ ತಾವು ಕಚೇರಿಗೆ ಭೇಟಿ ನೀಡುವ ವೇಳೆ ಯಾವುದೇ ಸಮಸ್ಯೆ ಕಂಡುಬರಬಾರದು. ಒಂದು ವೇಳೆ ಸಮಸ್ಯೆಗಳು ಕಂಡುಬಂದರೆ ಶಿಸ್ತಿನ ಕ್ರಮ ಜರಗಿಸಲಾಗುವುದು ಎಂದು ಡಿ.ಸಿ. ವಿ.ಪಿ.ಇಕ್ಕೇರಿಯವರು ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಕ್ರಮ-ಸಕ್ರಮ ಯೋಜನೆಗೆ ಸಂಬಂಧಿಸಿದಂತೆ 94 ಸಿ ಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸಿ. ಈ ಕಾಯ್ದೆಯ ಬಗ್ಗೆ ನಾಗರಿಕರಿಗೆ ಸೂಕ್ತ ಮಾಹಿತಿ ನೀಡಿ. ಅರ್ಜಿಗಳ ವಿತರಣೆ, ಸ್ವೀಕಾರ ಹಾಗೂ ವಿಲೇವಾರಿಯಲ್ಲಿ ಲೋಪವಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.