ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಪ್ರಧಾನಿ ಮೋದಿ ಕ್ರಮ ಖಂಡನೀಯ: ರಾಜಪ್ಪಮಾಸ್ತರ್
ಸೊರಬ, ಆ. 16: ಗೋ ಸಂರಕ್ಷಣೆಯ ಹೆಸರಿನಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದ್ದರೂ, ಕ್ರಮ ಕೈಗೊಳ್ಳುವುದರ ಬದಲು, ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಕ್ರಮ ಖಂಡನೀಯ ಎಂದು ಸಾಮಾಜಿಕ ಚಿಂತಕ ಟಿ. ರಾಜಪ್ಪಮಾಸ್ತರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಂಗಳವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ದೇಶದಲ್ಲಿ ಗೋ ರಕ್ಷಣೆ ನೆಪದಲ್ಲಿ ಅಮಾಯಕ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದಬ್ಬಾಳಿಕೆಗಳನ್ನು ಖಂಡಿಸಿ ಹಾಗೂ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಸಂಘ ಪರಿವಾರದ ಸದಸ್ಯರೇ ಗೋ ರಕ್ಷಣೆಯ ಹೆಸರಿನಲ್ಲಿ ದೇಶಾದ್ಯಾಂತ ಅಮಾಯಕ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರ ಹಲ್ಲೆ ನಡೆಸುತ್ತಿದ್ದಾರೆ. ಹಲ್ಲೆ ನಡೆಸುವಂತಹ ಹಕ್ಕು ಕೊಟ್ಟವರ್ಯಾರು ಎಂದು ಪ್ರಶ್ನಿಸಿದ ಅವರು, ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಕೂಡಲೇ ನಕಲಿ ಗೋ ರಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು. ತಪ್ಪು ಮಾಡಿದವರಿಗೆ ಸಂವಿಧಾನ ಬದ್ಧವಾಗಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿದ್ದಾರೆ. ಕಾನೂನು ಕೈಗೆತ್ತಿಗೊಂಡು ಮನುಷ್ಯರ ಮೇಲೆ ಹಲ್ಲೆ ನಡೆಸಲು ಯಾರಿಗೂ ಅವಕಾಶವಿಲ್ಲದಿದ್ದರೂ ನಿರಂತರವಾಗಿ ದೇಶದ ಹಲವು ಭಾಗಗಳಲ್ಲಿ ಇಂತಹ ಘಟನೆಗಳು ಪ್ರತಿನಿತ್ಯ ಸಂಭವಿಸುತ್ತಿವೆ. ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು ಕಂಡು ಕಂಡರಿಯದಂತೆ ಅಸಹಾಯಕತೆ ವ್ಯಕ್ತ ಪಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಕ್ರಮ ದೇಶದ ದುರಂತವಾಗಿದೆ ಎಂದರು.
ಸಲಹಾ ಸಮಿತಿ ಸದಸ್ಯ ಆರ್.ಅಬ್ದುಲ್ ರಶೀದ್ ಮಾತನಾಡಿ, ಉನಾದಲ್ಲಿ ಇತ್ತೀಚಿನ ಕೆಲ ದಿನಗಳ ಹಿಂದೆ ದಲಿತರ ಮೇಲೆ ಹಲ್ಲೆ ಹಾಗೂ ಪ್ರತಿನಿತ್ಯ ದೇಶದಾದ್ಯಂತ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯದಂತಹ ಅಮಾನವೀಯ ಘಟನೆಗಳಿಂದ ಅಂತಾರಾಷ್ಟ್ರಿಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಬುದ್ಧಿ ಜೀವಿಗಳು-ಚಿಂತಕರ ವಿರೋಧದ ನಡುವೆಯೂ ದೇಶದ ವಿವಿಧ ಭಾಗಗಳಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದರೂ, ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವ ಕೇಂದ್ರ ಸರಕಾರದ ಕ್ರಮ ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಡಿಎಸ್ಸೆಸ್ ತಾಲೂಕು ಸಂಚಾಲಕ ಪುರುಷೋತ್ತಮ್ ಗುಡ್ಡೇಕೊಪ್ಪ, ಶ್ಯಾಮಣ್ಣ ತುಡನೀರು, ನರೇಂದ್ರ, ತಿಪ್ಪಣ್ಣ, ಶಶಿರೇಖ, ರಾಜೇಶ್ವರಿ, ಮಹೇಶ್ ತುಡನೀರು, ನಾಗರಾಜ್ ಉದ್ರಿ, ಮಾಲತೇಶ, ಮಲ್ಲೇಶಪ್ಪ ಮತ್ತಿತರರಿದ್ದರು.