ಪ್ರವಾಸೋದ್ಯಮ ಅಭಿವೃದ್ಧಿಯೇ ಮುಖ್ಯ ಗುರಿ: ಸಚಿವ ದೇಶಪಾಂಡೆ
ಕಾರವಾರ, ಆ. 16: ಜಿಲ್ಲೆಯ ಸಣ್ಣ, ಮಧ್ಯಮ, ಗೃಹ ಕೈಗಾರಿಕೆ ನಡೆಸುವವರ ಸಮಸ್ಯೆಗಳನ್ನು ಆಲಿಸಲು ಹಾಗೂ ಸಮಸ್ಯೆ ಬಗೆಹರಿಸಿ ಅವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಗರದಲ್ಲಿ ಜಿಲ್ಲೆಯ ಕೈಗಾರಿಕೋದ್ಯಮಿಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸಂವಾದ ಕಾರ್ಯಕ್ರಮ ನಡೆಸಿದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಗಳನ್ನು ನಡೆಸುತ್ತಿರುವ ನೂರಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡರು. ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ಪೂರಕವಾಗುವಂತೆ ಕೈಗಾರಿಕೆಗಳನ್ನು ನಿರ್ಮಾಣ ಮಾಡಬೇಕು. ಅಲ್ಲದೆ ಕೈಗಾರಿಕೆಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಪರಿಸರ ಇಲಾಖೆಯಿಂದ ಆಗುವ ತೊಂದರೆಗಳ ಬಗ್ಗೆ ಪ್ರಸ್ತಾಪವಾದವು. ಜಿಲ್ಲೆಯಲ್ಲಿ ಶೇ. 50ಕ್ಕೂ ಹೆಚ್ಚು ಕೈಗಾರಿಕೆಗಳು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿವೆೆ. ಗೋವಾ ರಾಜ್ಯದಲ್ಲಿ ಯಾವುದೇ ಒಂದು ಕೈಗಾರಿಕೆಗಳು ಸ್ಥಗಿತವಾದರೆ, ಸರಕಾರ ಎರಡು ವರ್ಷದ ಬಳಿಕ ಆ ಬಗ್ಗೆ ವರದಿಗಳನ್ನು ಸಂಗ್ರಹಿಸಿ ಮತ್ತೇ ಪ್ರಾರಂಭಿಸಲು ಕ್ರಮಕೈಗೊಳ್ಳುತ್ತದೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ಕ್ರಮಕೈಗೊಳ್ಳಬೇಕು ಎಂದು ಕೈಗಾರಿಕೋದ್ಯಮಿಗಳು ಸಚಿವರ ಗಮನಕ್ಕೆ ತಂದರು. ನಂತರ ಮಾತನಾಡಿದ ಸಚಿವ ಆರ್. ವಿ. ದೇಶಪಾಂಡೆ, ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಬದ್ಧವಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆಗಳನ್ನು ತರಲು ತಾವು ಪ್ರಯತ್ನಿಸಿದ್ದಾಗ ಇಲ್ಲಿನ ಪರಿಸರ ನಾಶವಾಗುತ್ತದೆ ಎಂದು ಜನರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳನ್ನು ತರಲು ತಾವು ಹಿಂದೆ ವಿಫಲರಾಗಿರುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಕೈಗಾರಿಕೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಪರಿಸರ ಇಲಾಖೆ ನೀತಿ ನಿಯಮಾವಳಿಗಳಲ್ಲಿ ಅನೇಕ ಬದಲಾವಣೆ, ಸಡಿಲಿಕೆ ತರಲಾಗಿದೆ. ಅವುಗಳ ಲಾಭವನ್ನು ನೂತನವಾಗಿ ಕೈಗಾರಿಕೆ ಪ್ರಾರಂಭಿಸುವವರು ಪಡೆದುಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಬೇಕಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿ ನಿಟ್ಟಿನಲ್ಲಿ ಈಗಾಗಲೇ 200 ಕೋಟಿ ರೂ. ತರಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಉದ್ಯೋಗ ಅವಕಾಶ ಇಲ್ಲದ ಕಾರಣ ಅನೇಕ ಸುಶಿಕ್ಷಿತರು ಬೇರೆ ಜಿಲ್ಲೆ, ಹೊರರಾಜ್ಯಕ್ಕೆ ಉದ್ಯೋಗ ಅರಸಿ ತೆರಳುತ್ತಿದ್ದಾರೆ. ಜಿಲ್ಲೆಯಲ್ಲೇ ಪ್ರವಾಸೋದ್ಯಮ, ಕೈಗಾರಿಕೆಗಳು ಅಭಿವೃದ್ಧಿಯಾದರೆ ಅನೇಕರಿಗೆ ಉದ್ಯೋಗ ಲಭಿಸುತ್ತದೆ ಎಂದರು.