×
Ad

ಹಟ್ಟಿಗೆ ಬೆಂಕಿ: ಜಾನುವಾರುಗಳಿಗೆ ಗಂಭೀರ ಗಾಯ

Update: 2016-08-17 17:43 IST

ಮುಂಡಗೋಡ, ಆ.17: ಜಾನುವಾರುಗಳನ್ನು ಕಟ್ಟಿಹಾಕಿದ್ದ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಎರಡು ಹಸು ಒಂದು ಕರುವಿಗೆ ಗಾಯವಾಗಿರುವ ಘಟನೆ ಸೋಮವಾರ ರಾತ್ರಿ ತಾಲೂಕಿನ ಇಂದೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾನಗರದಲ್ಲಿ ನಡೆದಿದೆ.

ಇಂದಿರಾನಗರ ನಿವಾಸಿ ನಾಗಯ್ಯ ಈರಯ್ಯ ಹಿರೇಮಠ ಎಂಬುವರಿಗೆ ಸೇರಿದ ಹಟ್ಟಿಗೆ ಬೆಂಕಿ ತಗುಲಿದೆ. ಇವರು ಗ್ರಾಮದ ಹೊರಭಾಗದಲ್ಲಿರುವ ಹೊಲದ ಗುಡಿಸಲಿನಲ್ಲಿ ತಮ್ಮ ಮೂರು ಹಸುಗಳನ್ನು ಎಂದಿನಂತೆ ಕಟ್ಟಿಹಾಕಿ ಮನೆಗೆ ಊಟ ಮಾಡಲು ಬಂದಿದ್ದಾರೆ. ಈ ವೇಳೆ ಗುಡಿಸಲಿಗೆ ಬೆಂಕಿ ಬಿದ್ದಿದ್ದು, ಹಟ್ಟಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದರೆ, ಅದರಲ್ಲಿ ಕಟ್ಟಿಹಾಕಿದ್ದ ಎರಡು ಹಸು ಒಂದು ಕರು ಗಾಯಗೊಂಡಿದೆ. ಜೊತೆಗೆ ಗುಡಿಸಲಲ್ಲಿದ್ದ ಪೈಪುಗಳು ಮತ್ತು ಒಂದು ಪಂಪ್‌ಸೆಟ್ ಕೂಡಾ ಸುಟ್ಟು ಹೋಗಿದೆ.

ಸ್ಥಳಕ್ಕೆ ಪಶು ಅಧಿಕಾರಿ ಭೇಟಿ ನೀಡಿ ಹಸುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಎ.ವಿ ನಾಯ್ಕ, ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ರಫೀಕ್ ದೇಸಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News