ಎಬಿವಿಪಿ ಪ್ರತಿಭಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ
ಬೆಂಗಳೂರು, ಆ. 17: ಅಮ್ನೆಸ್ಟಿ ಸಂಘಟನೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಆಜಾದಿ’ ಘೋಷಣೆ ಕೂಗಿದರೆನ್ನಲಾದ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿರುವ ವೇಳೆ ಎಬಿವಿಪಿ ಪ್ರತಿಭಟನೆ ಎಷ್ಟು ಸರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೇನೆ ವಿರುದ್ಧ ಘೋಷಣೆ ಕೂಗಿದರೆನ್ನಲಾದ ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೀಗಿದ್ದೂ ಎಬಿವಿಪಿ ಪ್ರತಿಭಟನೆ ನಡೆಸೋದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರ ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದರು.
ಕೊಪ್ಪಳದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಂಭಾಷಣೆ ಆಡಿಯೋ ಬಿಡುಗಡೆ ಹಾಗೂ ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದ ಸಂಬಂಧ ತಾನು ಪ್ರತಿಕ್ರಿಯೆ ನೀಡುವುದಿಲ್ಲ. ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.