×
Ad

ಕೃಷಿಗೆ ಆ.30ರವರೆಗಷೆ್ಟೀ ನೀರು: ಸಚಿವ ಡಿಕೆಶಿ

Update: 2016-08-18 00:00 IST

ಬೆಂಗಳೂರು, ಆ. 17: ಮಳೆ ಕೊರತೆ ಹಿನ್ನೆಲೆಯಲ್ಲಿ ಕೆಆರ್‌ಎಸ್(ಕೃಷ್ಣರಾಜ ಸಾಗರ)ನಿಂದ ರೈತರಿಗೆ ಕೃಷಿ ಕಾರ್ಯಕ್ಕೆ ಆ.30ರ ವರೆಗೆ ಮಾತ್ರ ನೀರು ಬಿಡಲಿದ್ದು, ಆ ಬಳಿಕ ಕೃಷಿಗೆ ನೀರು ಹರಿಸಲು ಸಾಧ್ಯವಿಲ್ಲ. ಆದುದರಿಂದ ರೈತರು ಭತ್ತ, ಕಬ್ಬು ಹೊರತುಪಡಿಸಿ ಬೇರೆ ಬೆಳೆಗಳನ್ನು ಬೆಳೆಯಬೇಕೆಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಂಡಿದ್ದು, ರೈತರು ಸರಕಾರವನ್ನು ದೂರದೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಮೂಲಕ ಸಹಕರಿಸಬೇಕೆಂದು ಕೋರಿದರು.
ಜಲಾಶಯದಲ್ಲಿ ಬೆಂ.ನಗರಕ್ಕೆ ಕುಡಿಯಲು 15ಟಿಎಂಸಿ ಕನಿಷ್ಠ ಶೇಖರಣೆಯನ್ನು ಹೊರತುಪಡಿಸಿ 12.68ಟಿಎಂಸಿಯಷ್ಟು ನೀರಿದೆ. ಆದರೆ, ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿನ ನೀರಾವರಿ ಬೆಳೆಗಳಿಗೆ ನೀರೊದಗಿಸಲು 40 ಟಿಎಂಸಿಯಷ್ಟು ನೀರಿನ ಅಗತ್ಯವಿದೆ.
ಆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ರೈತರಿಗೆ ಭತ್ತ, ಕಬ್ಬು ಬೆಳೆಯಬೇಡಿ ಎಂದು ಮಾಹಿತಿ ನೀಡಿದ್ದೆವು. ಆದರೆ ಶೇ.50ರಷ್ಟು ರೈತರು ಭತ್ತದ ನಾಟಿ ಮಾಡಿದ್ದು, ಆ.30ರ ವರೆಗೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಆ ಬಳಿಕ ಸೆ.10ರ ನಂತರ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದರು.
ಈ ತಿಂಗಳ ಅಂತ್ಯದ ವೇಳೆ 4 ಟಿಎಂಸಿ, ಸೆಪ್ಟೆಂಬರ್-5, ಅಕ್ಟೋಬರ್-2, ನವೆಂಬರ್-1.3 ಹಾಗೂ ಡಿಸೆಂಬರ್ ಅಂತ್ಯದ ವೇಳೆ 0.70 ಟಿಎಂಸಿ ಸೇರಿ 25ರಿಂದ 26 ಟಿಎಂಸಿಯಷ್ಟು ನೀರು ಬರುವ ಸಾಧ್ಯತೆಗಳಿವೆ ಎಂದು ಅಂದಾಜು ಮಾಡಲಾಗಿದೆ. ಆದರೆ, ಕೃಷಿ ಚಟುವಟಿಕೆಗಳಿಗೆ ಕನಿಷ್ಠ 40 ಟಿಎಂಸಿ ನೀರಿನ ಅಗತ್ಯವಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ಹೀಗಾಗಿ ಕೃಷಿಗೆ ನೀರು ಹರಿಸಲು ಸಾಧ್ಯವಿಲ್ಲ. ಕೃಷಿಗೆ ನೀರೊದಗಿಸಿದರೆ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ ಎಂದ ಅವರು, ಮಳೆ ಬೀಳದಿದ್ದರೆ ಸಂಕಷ್ಟದ ಸ್ಥಿತಿ ನಿರ್ಮಾಣವಾಗಲಿದೆ. ಆದುದರಿಂದ ಪ್ರಸಕ್ತ ಪರಿಸ್ಥಿತಿಯನ್ನು ರೈತರು ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದ ಹಿನ್ನೆಲೆಯಲ್ಲಿ ಬಹುತೇಕ ಜಲಾಶಯಗಳಲ್ಲಿ ನೀರಿನ ಕೊರತೆಯಿದೆ. ಹೀಗಾಗಿ ಆಯಾ ಜಲಾನಯನ ಪ್ರದೇಶಗಳ ಪರಿಸ್ಥಿತಿಗೆ ತಕ್ಕಂತೆ ನೀರಾವರಿ ಸಲಹಾ ಸಮಿತಿಗಳು ಸೂಕ್ತ ತೀರ್ಮಾನ ಕೈಗೊಳ್ಳಲಿವೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.
ನಾಲೆ ಕೊನೆ ಭಾಗದಲ್ಲಿರುವ ಮದ್ದೂರು ಮತ್ತು ಮಳವಳ್ಳಿ ಜನತೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಆ ಭಾಗಗಳ ಕೆರೆಗಳಿಗೆ ನೀರು ಹರಿಸಲು ತೀರ್ಮಾನಿಸಿದ್ದು, ಆ ನೀರನ್ನು ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ ಸೂಚಿಸಲಾಗಿದೆ. ಈ ಸಂಬಂಧ ಪರಿಶೀಲನೆಗೆ ಗ್ರಾಪಂ, ಕೃಷಿ, ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ ಎಂದು ತಿಳಿಸಿದರು.
ಭವಿಷ್ಯದಲ್ಲಿ ವಿದ್ಯುತ್ ಕೊರತೆ ಭೀತಿ: ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾ ಯಿಸಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಮಳೆ ಕೊರತೆಯಿಂದ ವಿದ್ಯುತ್ ಕಂಪೆನಿಗಳಿಗೆ 2,500 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಭವಿಷ್ಯದಲ್ಲಿಯೂ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆಗಳಿವೆ ಎಂದ ಅವರು, ಜಲಾಶಯಗಳಲ್ಲಿಯೂ ಶೇ.40ರಷ್ಟು ನೀರಿನ ಸಂಗ್ರಹವಿದ್ದು, ಉಳಿದ ಶೇ.60ರಷ್ಟು ಕೊರತೆಯಿದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ 8ಸಾವಿರ ವೆ ು.ವ್ಯಾ.ವಿದ್ಯುತ್ ಲಭ್ಯವಿದ್ದು, 9,500 ಮೆ.ವ್ಯಾ.ನಷ್ಟು ಬೇಡಿಕೆಯಿದೆ. ಈ ಮಧ್ಯೆ ಕೂಡುಕುಳಂ ನಿಂದ 209ಮೆ.ವ್ಯಾ.ವಿದ್ಯುತ್ ಲಭ್ಯವಾಗುತ್ತಿದೆ. ಅಲ್ಲದೆ, ರಾಯಚೂರಿನ ಯಮರಸ್ ಘಟಕದಿಂದಲೂ ಶೀಘ್ರದಲ್ಲೇ ವಿದ್ಯುತ್ ದೊರೆಯಲಿದೆ ಎಂದರು.
ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಮಧ್ಯೆಯೇ ರೈತರ ಕೃಷಿ ಪಂಪ್‌ಸೆಟ್ ಹಾಗೂ ಕೈಗಾರಿಕೆಗಳಿಗೆ ಅಗತ್ಯದಷ್ಟು ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದ ಅವರು, ಪರಿಸ್ಥಿತಿ ನಿಭಾಯಿಸಲು ವಿದ್ಯುತ್ ಖರೀದಿಸಲು ಇಲಾಖೆ ಸಿದ್ಧತೆ ಕೈಗೊಂಡಿದೆ. ಜನ ಸಾಮಾನ್ಯ ರಿಗೆ ಸಮಸ್ಯೆ ಸೃಷ್ಟಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. 

ಸ್ವಾತಂತ್ರ ದಿನಾಚರಣೆ ಸೇರಿ ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಸ್ವಾತಂತ್ರ ಹೋರಾಟಗಾರರನ್ನು ಹೊರತುಪಡಿಸಿ ಅನ್ಯ ವ್ಯಕ್ತಿಗಳ ಭಾವಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸದಂತೆ ಸುತ್ತೋಲೆ ಹೊರಡಿಸುವಂತೆ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು. ಆತ್ಮಹತ್ಯೆಗೆ ಶರಣಾದ ಹೇಡಿಗಳು ನಮಗೆ ಆದರ್ಶವಲ್ಲ.
-ಡಿ.ಕೆ.ಶಿವಕುಮಾರ್, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News