ಮುಂದುವರಿದ ಒತ್ತುವರಿ ತೆರವು ಕಾರ್ಯಾಚರಣೆ

Update: 2016-08-17 18:33 GMT

ಬೆಂಗಳೂರು, ಆ.17: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಮುಂದುವರಿದಿದ್ದು, ಯಲಹಂಕದ ದೊಡ್ಡಬೊಮ್ಮಸಂದ್ರ, ರಾಜರಾಜೇಶ್ವರಿನಗರ, ಕೆ.ಆರ್.ಪುರ ವಲಯಗಳಲ್ಲಿ ಬಿಬಿಎಂಪಿ ಬುಧವಾರ ಒತ್ತುವರಿ ತೆರವು ಕಾರ್ಯ ನಡೆಸಿತು.

ಇಲ್ಲಿನ ದೊಡ್ಡಬೊಮ್ಮಸಂದ್ರದಲ್ಲಿ ಮಹಿಳೆಯರು ಮನೆ ತೆರವು ಮಾಡಬಾರದೆಂದು ಪರಿಪರಿಯಾಗಿ ಬೇಡಿಕೊಂಡರೂ ಕೂಡ ಅಧಿಕಾರಿಗಳು ಲೆಕ್ಕಿಸದೆ ಮನೆ ತೆರವುಗೊಳಿಸಿದರು.
  ಕೆ.ಆರ್.ಪುರದ ಹೊರಮಾವು ವಾರ್ಡ್‌ನ ಕ್ಯಾಲಸನಹಳ್ಳಿಯ ಸಿದ್ದರಾಮೇಶ್ವರ ಕಾಲೇಜು ಹಿಂಭಾಗ ಜೆಸಿಬಿಗಳಿಂದ ಕಾಂಪೌಂಡ್ ತೆರವು ಗೊಳಿಸಲಾಯಿತು. ಅದೇರೀತಿ, ರಾಜರಾಜೇಶ್ವರಿನಗರದ ಎಂಟು ಭಾಗಗಳಲ್ಲಿ ಕಟ್ಟಡಗಳು ಹಾಗೂ ಬೊಮ್ಮನಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಕೈಗೊಳ್ಳಲಾಯಿತು.

ಪ್ರತಿಭಟನೆ: ಒತ್ತುವರಿಗೆ ಮುಂದಾದ ವೇಳೆ ಕೆಲವರು ಸರ್ವೇ ಕಾರ್ಯ ಸರಿಯಿಲ್ಲ. ಮರು ಸರ್ವೇ ಮಾಡಬೇಕು. ಸರ್ವೇ ವರದಿಯನ್ನು ಮತ್ತೆ ಪರಿಶೀಲಿಸಬೇಕು ಎಂದು ಪಟ್ಟುಹಿಡಿದು ಅಧಿಕಾರಿಗಳ ಮುಂದೆ ಕೆಲಕಾಲ ಪ್ರತಿಭಟನೆ ಸಹ ನಡೆಸಿದರು. ಆದರೆ, ಅಧಿಕಾರಿಗಳು ಒತ್ತುವರಿ ತೆರವು ಕಾರ್ಯ ಮುಂದುವರಿಸಿದರು.
ತೆರವು ಸದ್ಯಕ್ಕಿಲ್ಲ:   
 ಯಲಹಂಕ ವಲಯದ ಅಲ್ಲಾಳಸಂದ್ರ, ಸುರಭಿ ಲೇಔಟ್, ಜಕ್ಕೂರು ಬಡಾವಣೆ, ಚಿಕ್ಕಬೊಮ್ಮಸಂದ್ರ, ಯಲಹಂಕ ಓಲ್ಡ್ ಟೌನ್, ಪುಟ್ಟೇನಹಳ್ಳಿಯಲ್ಲಿ ವಾರ್ಡ್ ಇಂಜಿನಿಯರ್ ಪಾಲಾಕ್ಷಯ್ಯ, ದಯಾನಂದ್ ಸೇರಿ ಪ್ರಮುಖರು ಸರ್ವೆ ಕಾರ್ಯ ಕೈಗೊಂಡರು. ಅಲ್ಲದೆ, ನಿನ್ನೆ ಸರ್ವೇ ಕಾರ್ಯ ಮಾಡುವಾಗ ಸ್ಥಳೀಯರು ತೀವ್ರ ಪ್ರತಿರೋಧ ಒಡ್ಡಿದ್ದರು. ಇದರಿಂದಾಗಿ ಇಂದು ಪಾಲಿಕೆಯ ಸರ್ವೆ ವಿಭಾಗದವರು ಪೊಲೀಸರ ನೆರವಿನಲ್ಲಿ ಸರ್ವೇ ಕಾರ್ಯವನ್ನು ಮುಂದುವರಿಸಿದರು.
ಸರ್ವೇಯರ್‌ಗೆ ಕಾಯುತ್ತ ಕುಳಿತ ಜಂಟಿ ಆಯುಕ್ತ: ಜಂಟಿ ಆಯುಕ್ತರು ಬಂದು ಸ್ಥಳ ಪರಿಶೀಲನೆ ನಡೆಸಿದರೂ, 10 ಗಂಟೆಗೆ ಬರಬೇಕಾಗಿದ್ದ ಸರ್ವೇಯರ್ ಮಧ್ಯಾಹ್ನ ಒಂದು ಗಂಟೆಯಾದರೂ ಬರದೆ ಜಂಟಿ ಆಯುಕ್ತರನ್ನು ಕಾಯಿಸಿದ ಘಟನೆ ಕ್ಯಾಲಸನಹಳ್ಳಿಯಲ್ಲಿ ನಡೆದಿದೆ.
 
ಕ್ಯಾಲಸನಹಳ್ಳಿಯಲ್ಲಿ ರಾಜಕಾಲುವೆ ತೆರವು ಕಾರ್ಯ ಮಾಡಬೇಕಾಗಿತ್ತು. ಆದರೆ, ನಿನ್ನೆ ಸಂಜೆ ರಾಜಕಾಲುವೆ ತೆರವಿಗೆ ಗುರುತು ಹಾಕಿ ಹೋಗಿದ್ದ ಸರ್ವೇಯರ್ ಮುಂದಿನ ತೆರವು ಕಾರ್ಯಾಚರಣೆಗೆ ಇಂದು ಬೆಳಗ್ಗೆ ಗುರುತು ಹಾಕಿ ಕೊಡಬೇಕಾಗಿತ್ತು. ಆದರೆ, ಸರ್ವೆಯರ್ ತಡವಾಗಿ ಬಂದ ಕಾರಣ ಮೂರು ಗಂಟೆಗಳಿಗೂ ಹೆಚ್ಚು ಕಾಲ ಮಂದಗತಿಯಲ್ಲಿ ಒತ್ತುವರಿ ತೆರವು ಕಾರ್ಯಸಾಗಿದೆ. ಜಂಟಿ ಆಯುಕ್ತರು ಸಹ ಬೇಗ ಬಂದು 2 ತಾಸು ಸರ್ವೇಯರ್‌ಗಾಗಿ ಕಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News