×
Ad

ಅತ್ಯಾಧುನಿಕ ಸಾರಿಗೆ ಬಸ್‌ಗಳಿಗೆ ಸಿಎಂ ಚಾಲನೆ

Update: 2016-08-19 00:01 IST

ಬೆಂಗಳೂರು, ಆ.18: ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಸಿಸಿ ಕ್ಯಾಮರಾ, ಧ್ವನಿ ಪ್ರಸರಣ, ಎಲ್‌ಇಡಿ ಪ್ರದರ್ಶನ ವ್ಯವಸ್ಥೆ, ಸ್ವಯಂ ಚಾಲಿನ ಬಾಗಿಲು, ಅಪಾಯ ಸಂದೇಶ ರವಾನಿಸುವ ಗುಂಡಿ, ವಿಕಲಚೇತರಿಗೆ ನೆರವಾಗಲು ‘ರ್ಯಾಂಪ್’ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳುಳ್ಳ ನಗರ ಸಾರಿಗೆ ಬಸ್‌ಗಳಿಗೆ ಚಾಲನೆ ನೀಡಲಾಗಿದೆ.
ಗುರುವಾರ ವಿಧಾನಸೌಧದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ 247 ಹೊಸ ಬಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿಸಿದರು. ಅಲ್ಲದೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ರಮೇಶ್ ಕುಮಾರ್ ಸೇರಿದಂತೆ ಅಧಿಕಾರಿ ಗಳೊಂದಿಗೆ ನೂತನ ಬಸ್‌ನಲ್ಲಿ ಒಂದು ಸುತ್ತು ಪ್ರಯಾಣಿಸಿದ್ದು ವಿಶೇಷವಾಗಿತ್ತು.
ಕೇಂದ್ರದ ‘ಅಮೃತ್’ ಹಾಗೂ ‘ನರ್ಮ್’ ಯೋಜನೆಯಡಿ ಒಟ್ಟಾರೆ 487 ಹೈಟೆಕ್ ಬಸ್‌ಗಳನ್ನು ಖರೀದಿಸಲು ತೀರ್ಮಾನಿಸಲಾಗಿದ್ದು, ಆ ಪೈಕಿ ಇಂದು ಒಟ್ಟು 247 ಬಸ್‌ಗಳನ್ನು ಕಾರ್ಯಾಚರಣೆಗಿಳಿಸಲಾಗಿದೆ. ಕೇಂದ್ರ ಶೇ.60, ರಾಜ್ಯ-ಶೇ.30 ಹಾಗೂ ಸಾರಿಗೆ ನಿಗಮ-ಶೇ.10ರಷ್ಟು ಹಣಕಾಸು ಹೊಂದಾಣಿಕೆ ಯೋಜನೆ ಇದಾಗಿದ್ದು, ಒಟ್ಟು 171 ಕೋಟಿ ರೂ.ವೆಚ್ಚದಲ್ಲಿ ನೂತನ ಬಸ್ ಖರೀದಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ನೂತನ ಬಸ್ ಸಂಚಾರ: ದಕ್ಷಿಣ ಕನ್ನಡ ಮತ್ತು ಉಡುಪಿ-48, ಶಿವಮೊಗ್ಗ-20, ಭದ್ರಾವತಿ-10, ಚಿತ್ರದುರ್ಗ-20, ದಾವಣಗೆರೆ-20, ಮೈಸೂರು-32, ತುಮಕೂರು -25, ಹಾಸನ-25, ಮಂಡ್ಯ-15, ರಾಮನಗರ-10 ಹಾಗೂ ಕೋಲಾರ ಮತ್ತು ಕೆಜಿಎಫ್-26 ನೂತನ ಬಸ್‌ಗಳನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News