×
Ad

ಕೇಂದ್ರ ಸಚಿವರಿಗೆ ಶಿಫಾರಸು ಸಲ್ಲಿಕೆ: ವೌಲಾನ ಶಬ್ಬೀರ್ ಅಹ್ಮದ್ ನದ್ವಿ

Update: 2016-08-19 00:06 IST

ಬೆಂಗಳೂರು, ಆ.18: ಕೇಂದ್ರ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ‘ನೂತನ ಶಿಕ್ಷಣ ನೀತಿ-2016’ಗೆ ಸಂಬಂಧಿಸಿದಂತೆ ತಮ್ಮ ಶಿಫಾರಸುಗಳನ್ನು ಸಲ್ಲಿಸಲಾಗಿದೆ ಎಂದು ನೈತಿಕ ವೌಲ್ಯಗಳ ಪ್ರೋತ್ಸಾಹ ಸಂಘಟನೆ (ಅಸೋಸಿಯೇಷನ್ ಫಾರ್ ಪ್ರೊಮೊಷನ್ ಆಫ್ ಮಾರಲ್‌ವಾಲ್ಯೂಸ್)ಯ ಅಧ್ಯಕ್ಷ ವೌಲಾನ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ ತಿಳಿಸಿದ್ದಾರೆ.
ಗುರುವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್‌ರನ್ನು ಆ.12ರಂದು ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ನಮ್ಮ ಸಂಘಟನೆಯ ಶಿಫಾರಸುಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು ಎಂದರು.
ಸಂಸದರಾದ ವೌಲಾನ ಬದ್ರುದ್ದೀನ್ ಅಜ್ಮಲ್, ವೌಲಾನ ಸಿರಾಜುದ್ದೀನ್ ಅಜ್ಮಲ್ ಅವರ ಸಮ್ಮುಖದಲ್ಲಿ ನಮ್ಮ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಿ, ನೂತನ ಶಿಕ್ಷಣ ನೀತಿಯಲ್ಲಿ ಸಂವಿಧಾನಬದ್ಧವಾಗಿ ಅಲ್ಪಸಂ ಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ ಸ್ಥಾನಮಾನ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಗಮನ ಹರಿಸುವಂತೆ ಮನವಿ ಮಾಡಲಾಯಿತು ಎಂದು ಹೇಳಿದರು.
ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಎಲ್ಲ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ವಿನಾಯಿತಿ ನೀಡಲಾಗಿದೆ. ಅದನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಸಂಬಂಧ ರಚನೆ ಮಾಡಲಾಗುವ ಎಲ್ಲ ಬಗೆಯ ಸಮಿತಿಗಳಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಬೇಕು ನಿಯೋಗ ಮನವಿ ಮಾಡಿದೆ ಎಂದು ಶಬ್ಬೀರ್ ನದ್ವಿ ತಿಳಿಸಿದರು.
ಯೋಗದಲ್ಲಿರುವ ಕೆಲವು ಆಸನಗಳು ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಆದುದರಿಂದ, ಶಾಲಾ-ಕಾಲೇಜುಗಳಲ್ಲಿ ಯೋಗ ಮಾಡುವುದನ್ನು ಕಡ್ಡಾಯಗೊಳಿಸದೆ ಐಚ್ಛಿಕವಾಗಿಡಬೇಕು. ಶಿಕ್ಷಣದ ಸ್ವರೂಪವು ಜಾತ್ಯತೀತವಾಗಿರಬೇಕು ಎಂದು ಅವರು ಹೇಳಿದರು.
ಸಂಸ್ಕೃತ ಕಲಿಕೆಯನ್ನು ಕಡ್ಡಾಯಗೊಳಿಸಬಾರದು. ಮುಸ್ಲಿಮ್ ವಿದ್ಯಾರ್ಥಿಗಳಿಗೆ ಸಂಸ್ಕೃತ ಬದಲು ಅರೇಬಿಕ್ ಹಾಗೂ ಉರ್ದು ಕಲಿಕೆಗೆ ಶಿಕ್ಷಣ ನೀತಿಯಲ್ಲಿ ಅವಕಾಶ ಕಲ್ಪಿಸಬೇಕೆಂದು ನಮ್ಮ ನಿಯೋಗ ಸಲ್ಲಿಸಿರುವ ಎಲ್ಲ ಶಿಫಾರಸುಗಳಿಗೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ತಿಳಿಸಿದರು.
ಕಾಕತಾಳೀಯವೆಂಬಂತೆ ನಮ್ಮ ನಿಯೋಗಕ್ಕೆ ಪ್ರಕಾಶ್ ಜಾವಡೇಕರ್ ನೀಡಿದ್ದ ಭರವಸೆಗಳನ್ನು ಅದೇ ದಿನ ಮಧ್ಯಾಹ್ನ ರಾಜ್ಯಸಭೆಯಲ್ಲಿ ಹೇಳಿಕೆ ನೀಡುವಾಗ ಪುನರುಚ್ಚರಿಸಿದರು. ನೂತನ ಶಿಕ್ಷಣ ನೀತಿಯೂ ಜಾತ್ಯತೀತವಾಗಿರಬೇಕು ಎಂಬ ಆಶಯಕ್ಕೆ ಸಚಿವರ ನಡೆಯು ಪೂರಕವಾಗಿ ರುವಂತೆ ಕಂಡಿತು ಎಂದು ಅವರು ಹೇಳಿದರು.
ನಿಯೋಗದಲ್ಲಿ ಸಂಘಟನೆಯ ಕಾರ್ಯದರ್ಶಿ ಝಿಯಾವುಲ್ಲಾ ಖಾನ್, ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ, ಧಾರವಾಡದ ಕರ್ನಾಟಕ ವಿವಿಯ ವಿಶ್ರಾಂತ ಉಪಕುಲಪತಿ ಪ್ರೊ.ಎಂ.ಖ್ವಾಜಾ ಪೀರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News