ಮೋಸಗಾರರ ಮಾತು ನಂಬಿ ಚಿನ್ನದ ಸರ ಕಳೆದುಕೊಂಡ ವೃದ್ಧೆ

Update: 2016-08-19 17:32 GMT

ಮುಂಡಗೋಡ , ಆ.19: ಬಂಗಾರದ ಒಡವೆಗಳನ್ನು ಪಾಲೀಶ್ ಮಾಡಿಕೊಡುತ್ತೇವೆ ಎಂದು ಹೇಳಿ ಸುಮಾರು 28 ಸಾವಿರ ರೂ. ವೌಲ್ಯದ ಚಿನ್ನದ ಸರವನ್ನು ಎಗರಿಸಿಕೊಂಡು ಪರಾರಿಯಾದ ಘಟನೆ ಪಟ್ಟಣದ ರೋಟರಿ ಶಾಲೆಯ ಹತ್ತಿರದ ಕೆಎಚ್‌ಬಿ ಕಾಲನಿಯಲ್ಲಿ ಶುಕ್ರವಾರ ಸಂಭವಿಸಿದೆ.

ಇಲ್ಲಿನ ನಿವಾಸಿ ಮಹಾಲಕ್ಷ್ಮೀ ವಾಮನರಾವ್ ಮಧಭಾವಿ ಮೋಸಗಾರರ ಮಾತಿಗೆ ಮರುಳಾಗಿ ಚಿನ್ನದ ಸರ ಕಳೆದುಕೊಂಡ ಮಹಳೆ. ಶುಕ್ರವಾರ ಬೈಕ್‌ನಲ್ಲಿ ಆಗಮಿಸಿದ್ದ ಇಬ್ಬರು ಯುವಕರು ಚಿನ್ನದ ಸರಕ್ಕೆ ಪಾಲಿಶ್ ಮಾಡಿ ಹೊಳೆಯುವಂತೆ ಮಾಡುತ್ತೇವೆ ಎಂದು ಹೇಳಿದ್ದರು. ಅವರ ಮಾತು ನಂಬಿ ಮಹಾಲಕ್ಷ್ಮೀ ಮಧಭಾವಿ 14 ಗ್ರಾಂ. ತೂಕದ ಬಂಗಾರದ ಸರವನ್ನು ನೀಡಿದ್ದರು.

ಮಹಿಳೆಯ ಮನೆಯಿಂದ ಕುಕ್ಕರ್ ಪಡೆದುಕೊಂಡು ಅದರಲ್ಲಿ ಬಂಗಾರ ತೊಳೆಯುವ ವಸ್ತುಗಳನ್ನು ಹಾಕಿ ಬಂಗಾರದ ಚೈನ್ ಅದರಲ್ಲಿ ಹಾಕಿದಂತೆ ಮಾಡಿ ಅವರಿಗೆ ತಿಳಿಯದಂತೆ ಚೈನ್‌ನ್ನು ಎಗರಿಸಿ, ಕುಕ್ಕರ್‌ನ ಮುಚ್ಚಳ ಹಾಕಿ ಸ್ವಲ್ಪಬಿಸಿಮಾಡಿ ಮುಚ್ಚಳ ತೆಗೆಯಿರಿ ಎಂದು ಹೇಳಿದ್ದರು. ಈ ಮಾತುಗಳನ್ನು ನಂಬಿದ ಮಹಿಳೆ ಕುಕ್ಕರನ್ನು ಬಿಸಿ ಮಾಡಲು ಒಳಹೋದಾಗ ಮೋಸಗಾರರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News