ಸಕಲೇಶಪುರದ ಪತ್ರಕರ್ತರಿಂದ ವಿಭಿನ್ನ ಮಾಧ್ಯಮ ದಿನಾಚರಣೆ
ಸಕಲೇಶಪುರ, ಆ.21: ಪಟ್ಟಣದ ರೋಟರಿ ಸಮುದಾಯ ಭವನದಲ್ಲಿ ರವಿವಾರ ಮಾಧ್ಯಮ ದಿನಾಚರಣೆ ಅಂಗವಾಗಿ ಸಾರ್ವಜನಿಕರೊಂದಿಗೆ ಸಂವಾದ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಭಾವಗೀತೆ, ಜನಪದಗೀತೆ ಸ್ಪರ್ಧೆಗಳನ್ನು ನಡೆಸಲಾಯಿತು. ಪತ್ರಿಕೆ ಹಂಚುವ ಹುಡುಗರಿಗೆ ಸಂಘದ ವತಿಯಿಂದ ಕೊಡೆಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಸಮಾರಂಭವನ್ನು ಶಾಸಕ ಎಚ್.ಕೆ.ಕುಮಾರಸ್ವಾಮಿ ಉದ್ಘಾಟಿಸಿದರು. ಕೆಲ ಓದುಗರು ಪತ್ರಿಕೆಗಳಲ್ಲಿನ ವಿಚಾರಗಳನ್ನು ತಾಳ್ಮೆಯಿಂದ ಓದಿ ಅರ್ಥ ಮಾಡಿಕೊಳ್ಳದೆ ತಪ್ಪು ಸಂದೇಶಗಳನ್ನು ಹರಡುತ್ತಾರೆ. ಇದರಿಂದ ಜನರಿಗೆ ಪತ್ರಿಕೆಗಳ ಮೇಲಿರುವ ನಂಬಿಕೆ ಕಡಿಮೆಯಾಗುವ ಜೊತೆಗೆ ಸಮಾಜದ ಸಾಮರಸ್ಯ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ ಎಂದರು.
ಸಂವಿಧಾನದ ಎಲ್ಲಾ ಅಂಗಗಳಿಗಿಂತ ಶ್ರೇಷ್ಠವೆವೆನಿಸಿದ ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ವಾಸ್ತವ ಅಂಶಗಳಿಗೆ ಹೆಚ್ಚು ಒತ್ತು ನೀಡಬೇಕೆ ಹೊರತು ಗಾಳಿ ಸುದ್ದಿಗಳನ್ನು ಪರಿಗಣಿಸಬಾರದು. ಸಾರ್ವಜನಿಕರು, ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗದವರ ತಪ್ಪುಗಳನ್ನು ಎತ್ತಿ ಹಿಡಿಯುವ ಜವಬ್ದಾರಿಯುತ ಸ್ಥಾನದಲ್ಲಿರುವ ಪತ್ರಕರ್ತರು ತಪ್ಪು ಮಾಡಬಾರದು. ಎಲ್ಲರನ್ನೂ ಸರಿ ದಾರಿಗೆ ತರುವ ನಿಷ್ಪಕ್ಷಪಾತ, ಕಾರ್ಯತತ್ಪರತೆಯಿಂದ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಸುಪ್ರದೀಪ್ ಯಜಮಾನ್ ಮಾತನಾಡಿ, ಪತ್ರಕರ್ತರು ಕೇವಲ ಭ್ರಷ್ಟಾಚಾರ, ಕೊಲೆ, ಸುಲಿಗೆ, ಅಪಘಾತಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಮಾಡದೆ ಸಮಾಜ ಸೇವೆಯಲ್ಲಿಯೂ ತೊಡಗಿದ್ದಾರೆ. ನೂರಾರು ಸಂಕಷ್ಟಗಳ ನಡುವೆ ಸಮಾಜದ ಓರೆಕೋರೆಗಳನ್ನು ತಿದ್ದುವ ಪತ್ರಕರ್ತರ ಬದುಕು ಮಾತ್ರ ಸಂಕಷ್ಟದ ನಡುವೆಯೇ ನಡೆಯುತ್ತದೆ. ಈ ಸಮೂಹಕ್ಕೆ ಕನಿಷ್ಠ ಸೌಲಭ್ಯಗಳನ್ನಾದರೂ ಒದಗಿಸಲು ಸರಕಾರ ಮುಂದಾಗಬೇಕು. ಸಮ ಸಮಾಜದ ನಿರ್ಮಾತೃಗಳಾದ ಪತ್ರಕರ್ತರು ಒಳ್ಳೆಯ ಕೆಲಸಗಳನ್ನು ಮಾಡುವವರನ್ನು ಗುರುತಿಸಿ ಬೆಳಕಿಗೆ ತಂದು ಬೆಳೆಸುತ್ತಾರೆ ಎಂಬುದಕ್ಕೆ ತಾವೇ ಉದಾಹರಣೆ ಎಂದರು.
ಮಾಧ್ಯಮ ಸಂವಾದ ಕಾರ್ಯಕ್ರಮವನ್ನು ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿವಾನಂದ ತಗಡೂರು ನಿರ್ವಹಿಸಿದರು. ಪತ್ರಿಕೆ, ಪತ್ರಕರ್ತ ಹಾಗೂ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು, ವಿದ್ಯಾರ್ಥಿಗಳು, ವಿದ್ಯಾ ಸಂಸ್ಥೆ ಅಧಿಕಾರಿಗಳು, ಉಪನ್ಯಾಸಕರು, ವಿವಿಧ ಸಂಘಟನೆ ಮುಖಂಡರು ಪ್ರಶ್ನೆಗಳನ್ನು ಕೇಳಿದರು.
ತಾಲೂಕು ಬಿಜೆಪಿಯ ಹೆತ್ತೂರು ದೇವರಾಜ್, ಮೊರಾರ್ಜಿ ಶಾಲೆ ಪ್ರಾಂಶುಪಾಲ ಶತೇಂದ್ರ ಕುಮಾರ್, ಪಯೋನಿಯರ್ ಶಾಲೆ ಮುಖ್ಯೋಪಾಧ್ಯಾಯ ಅಣ್ಣಪ್ಪಸ್ವಾಮಿ, ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಆರ್.ಎನ್.ಕೃಷ್ಣಮೂರ್ತಿ, ರೋಟರಿ ಶಾಲೆ ವಿದ್ಯಾರ್ಥಿನಿ ಗೌರಿ, ದೇವಾಲದಕೆರೆ ಗ್ರಾಪಂ ಉಪಾಧ್ಯಕ್ಷ ಪೂರ್ಣೇಶ್ ಮೊದಲಾದವರು ಪಾಲ್ಗೊಂಡರು. ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಕಲಗೂಡು, ಖಜಾಂಚಿ ಜಿ.ಪ್ರಕಾಶ್, ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ, ತಾಲೂಕು ಅಧ್ಯಕ್ಷ ರವಿಕುಮಾರ್ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ್ ತಿಮ್ಮಯ್ಯ, ಜಿಪಂ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಸುದರ್ಶನ್, ಎಸಿಎಫ್ ರಮೇಶ್ ಬಾಬು, ತಾಪಂ ಅಧ್ಯಕ್ಷೆ ಶ್ವೇತಾ ಪ್ರಸನ್ನ, ಉಪಾಧ್ಯಕ್ಷ ಆರ್.ಮಂಜುನಾಥ್, ಪುರಸಭಾಧ್ಯಕ್ಷೆ ಪುಷ್ಪಾವತಿ, ರೋಟರಿ ಕ್ಲಬ್ ಅಧ್ಯಕ್ಷ ರಜನಿಕಾಂತ್ ಮೊದಲಾದವರಿದ್ದರು. ಕಿರಣ್ ಕುಮಾರ್ ಪ್ರಾರ್ಥಿಸಿದರು. ಪ್ರಸನ್ನ ಕುಮಾರ್ ಸ್ವಾಗತಿಸಿದರು. ಮಲ್ನಾಡ್ ಮೆಹಬೂಬ್ ವಂದಿಸಿದರು. ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜೈಕುಮಾರ್ ಮಲ್ನಾಡ್ ಕಾರ್ಯಕ್ರಮ ನಿರೂಪಿಸಿದರು.