×
Ad

ಹಜ್‌ಘರ್‌ಗೆ ಟಿಪ್ಪುಸುಲ್ತಾನ್ ಹೆಸರಿಡಲು ಎಸ್ಸೆಸ್ಸೆಫ್ ಆಗ್ರಹ

Update: 2016-08-21 22:39 IST

ಮೈಸೂರು, ಆ.21: ಬೆಂಗಳೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹಜ್‌ಘರ್‌ಗೆ ಟಿಪ್ಪುಸುಲ್ತಾನ್ ಹೆಸರಿಡಲು ರಾಜ್ಯ ಎಸ್ಸೆಸ್ಸೆಫ್ ಮೈಸೂರಿನ ರಾಜೀವ್ ನಗರದ ಎಸ್.ಎ. ಲೇಔಟ್‌ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಆಝಾದಿ ರ್ಯಾಲಿ ಮತ್ತು ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಆಗ್ರಹಿಸಿದೆ.

ಸಂದೇಶ ಭಾಷಣ ಮಾಡಿದ ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ, ಭಾರತವು ಹಲವಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಸಹಿಷ್ಣುತೆಯಿಂದ ಕೂಡಿದ ಪ್ರೀತಿ, ವಿಶ್ವಾಸದ ರಾಷ್ಟ್ರವಾಗಿದೆ. ದೇಶದಲ್ಲಿ ದಲಿತ, ಅಲ್ಪಸಂಖ್ಯಾತ ಹಾಗೂ ಮೂಲನಿವಾಸಿಗಳ ಮೇಲೆ ನಿರಂತರವಾಗಿ ನಡೆಯುವ ದೌರ್ಜನ್ಯದ ಕುರಿತು ಸ್ವತ: ರಾಷ್ಟ್ರಪತಿ ಆತಂಕಪಡುವಂತಹ ಪರಿಸ್ಥಿತಿ ಬಂದಿದ್ದರೆ ಅದರ ಗಂಭೀರತೆಯನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ, ವಕ್ಫೃ್ಬೋರ್ಡ್ ನಿರ್ದೇಶಕ ಎನ್.ಕೆ.ಎಂ. ಶಾಫಿ ಸಅದಿ, ಪೂರ್ವಿಕ ಮಹಾತ್ಮರು ಜಾತಿ ಧರ್ಮದ ಭೇದ, ಭಾವವಿಲ್ಲದೆ ಹೋರಾಡಿದ ಫಲವಾಗಿ ಭಾರತ ಸ್ವತಂತ್ರಗೊಂಡಿದೆ. ಇಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆಗಳನ್ನು ನಿರ್ಮೂಲನೆ ಮಾಡಿ ಶಾಂತಿ, ಸೌಹಾರ್ದದಿಂದ ಬಾಳಬೇಕಾಗಿದೆ ಎಂದರು.

  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ ಇಬ್ರಾಹೀಂ, ದೇಶದ ಶಾಂತಿ ಸೌಹಾರ್ದಕ್ಕೆ ತೊಡಕಾಗಿರುವ ಗುಂಪುಗಳಿಗೆ ನೈತಿಕತೆಯ ಪಾಠವನ್ನು ಕಲಿಸುವಲ್ಲಿ ಎಸ್ಸೆಸ್ಸೆಫ್ ಸಂಘಟನೆಯ ಪ್ರಯತ್ನ ಶ್ಲಾಘನೀಯ ಎಂದರು. ಸಚಿವ ಯು.ಟಿ ಖಾದರ್ ಸಿ.ಡಿ ಬಿಡುಗಡೆಗೊಳಿಸಿ ಮಾತನಾಡಿದರು. ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಫಾ. ಅಲ್ಮೇರಾ ಸಂದೇಶ ಭಾಷಣ ನೀಡಿದರು. ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್  ಸೇಠ್‌ರನ್ನು ಸನ್ಮಾನಿಸಲಾಯಿತು.

 ಮೈಸೂರು ಮನಪಾ ಮೇಯರ್ ಬಿ.ಎಲ್. ಭೈರಪ್ಪ, ಶಾಸಕರಾದ ಎಚ್. ವಾಸು, ಮೊಯ್ದಿನ್ ಬಾವ, ಹಬೀಬ್ ಕೋಯ ಕುವೈತ್, ಅಬ್ದುಲ್ಲತೀಫ್ ಶುಂಠಿಕೊಪ್ಪ, ಅಝೀಝ್ ಅಬ್ದುಲ್ಲ, ಮೈಸೂರು ಬಾವ, ಸೈಫುದ್ದೀನ್ ದಾವಣಗೆರೆ, ರಹ್ಮಾನ್ ಸಅದಿ ಕತರ್, ಕೊಡಗು ಜಿಪಂ ಸದಸ್ಯ ಲತೀಫ್ ಶುಂಠಿಕೊಪ್ಪ, ಆರೀಫ್ ರಝಾ ತುಮಕೂರು, ಕಾರ್ಪೊರೇಟರ್ ಸುಹೈಲ್ ಬೇಗ್ ಮತ್ತಿತರರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯ ನಾಯಕರಾದ ಸಿ.ಟಿ.ಎಂ. ತಂಙಳ್ ಮನ್ಶರ್ ದುಆ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸೈಯದ್ ಯೂನುಸ್ ಸಾಬ್ ಸ್ವಾಗತಿಸಿದರು. ಕೆ.ಎ. ಹಸೈನಾರ್ ವಂದಿಸಿದರು. ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಠರಾವು ಮಂಡಿಸಿದರು. ಯಾಕೂಬ್ ಮಾಸ್ಟರ್ ವೀರಾಜಪೇಟೆ ಕಾರ್ಯಕ್ರಮ ನಿರೂಪಿಸಿದರು.

  ಕಾರ್ಯಕ್ರಮಕ್ಕೆ ಮುಂಚಿತವಾಗಿ ನಡೆದ ಆಝಾದಿ ಜಾಥಾಕ್ಕೆ ಶಾಂತಿನಗರ ಮಸ್ಜಿದೇ ಶುಹದಾ ವಠಾರದಲ್ಲಿ ಸೈಯದ್ ಯೂನುಸ್ ಸಾಬ್ ಚಾಲನೆ ನೀಡಿದರು. ಮೌಲಾನಾ ಮುಫ್ತಿ ಸಜ್ಜಾದ್ ಹುಸೈನ್ ಮಿಸ್ಬಾಹಿ ದುಆ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News