×
Ad

ದೇವೇಗೌಡರ ಕುಟುಂಬಕ್ಕೆ ಪೊಲೀಸ್ ಭದ್ರತೆಯಿಂದ ಸರಕಾರಕ್ಕೆ ನಷ್ಟ: ಕೆಡಿಪಿ ಸದಸ್ಯ ಆಕ್ಷೇಪ

Update: 2016-08-22 22:18 IST

ಹಾಸನ, ಆ.22: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಎಸ್ಕಾರ್ಟ್ ಹಾಗೂ ಪೊಲೀಸ್ ಸಿಬ್ಬಂದಿ ಭದ್ರತೆ ನೀಡಿರುವುದರಿಂದ ಸರಕಾರದ ಹಣವನ್ನು ನಷ್ಟ ಮಾಡಲಾಗುತ್ತಿದೆ ಎಂದು ಜಿಪಂ ಕೆಡಿಪಿ ಸದಸ್ಯ ದೇವರಾಜೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ರಾಜ್ಯ ಸರಕಾರ ನೀಡುತ್ತಿರುವ ಎಸ್ಕಾರ್ಟ್ ಮತ್ತು ಪೊಲೀಸ್ ಸಿಬ್ಬಂದಿ ಭದ್ರತೆಯನ್ನು ಹಾಗೂ ಡಾ.ರಮೇಶ್, ಬಾಲಕರಷ್ಣ, ಎಚ್.ಡಿ. ರೇವಣ್ಣ, ಎಚ್.ಡಿ.ಕುಮಾರಸ್ವಾಮಿ ಮತ್ತು ಮೂವರು ಹೆಣ್ಣುಮಕ್ಕಳಿಗೂ ಪೊಲೀಸ್ ಭದ್ರತೆ ನಿಯೋಜಿಸಿರುವುದರ ಬಗ್ಗೆ ಪತ್ರ ಬರೆದು ಮಾಹಿತಿ ಕೇಳಿದ್ದೇನೆ ಎಂದರು.
ಯಾವ ಮಾನದಂಡದಲ್ಲಿ ಇವರಿಗೆಲ್ಲಾ ಭದ್ರತೆ ಒದಗಿಸಲಾಗಿದೆ ಎಂದು ಪ್ರಶ್ನೆ ಮಾಡಲಾಗಿತ್ತು. ವಿಐಪಿಗಳಿಗೆ ಯಾವ ಭದ್ರತೆಗಳು ಎಷ್ಟೆಷ್ಟು ದಿವಸ ಕೊಡಬಹುದು ಎಂಬುವುದರ ಬಗ್ಗೆ ಪಟ್ಟಿ ನೀಡಿದ್ದಾರೆ. ದಾಖಲೆ ಪ್ರಕಾರ ಎಚ್.ಡಿ.ದೇವೇಗೌಡರು ಪ್ರಧಾನಿ ಆದ ವೇಳೆ ಭದ್ರತೆ ಯಾವ ರೀತಿ ನೀಡಲಾಗಿತ್ತು. ಅಧಿಕಾರದಿಂದ ಕೆಳಗೆ ಇಳಿದ ಮೇಲೆ 5 ವರ್ಷಗಳ ಕಾಲ ಭದ್ರತೆ ಕೊಡಬಹುದು ಎಂದು ಹೇಳಲಾಗಿದೆ. ಇಂದಿರಾಗಾಂಧಿ ನಂತರ 10 ವರ್ಷಕ್ಕೆ ಹೆಚ್ಚಿಸುವ ತೀರ್ಮಾನ ಮಾಡಲಾಯಿತು. ಆದರೆ, ಇದಕ್ಕೂ ಕೆಲ ನಿಬಂಧನೆಗಳನ್ನು ಹೇರಲಾಗಿದೆ. ದೇವೇಗೌಡರ ಕುಟುಂಬದ ಸದಸ್ಯರು ಒಟ್ಟಿಗೆ ವಾಸವಿರಬೇಕು. ಇವೆಲ್ಲವನ್ನು ತಿಳಿಸಲಾಗಿದೆ ಎಂದು ಸಲಹೆ ನೀಡಿದರು.
ರೇವಣ್ಣ ಒಬ್ಬರಿಗೆ ಮಾತ್ರ ಏತಕ್ಕೆ ಎಸ್ಕಾರ್ಟ್, ಪೊಲೀಸ್ ಭದ್ರತೆ ನೀಡುತ್ತೀರಿ, ನಾನು ಕೂಡ ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿದ್ದೇನೆ. ಅದೇ ರೀತಿ ಸಾರ್ವಜನಿಕರೆಲ್ಲರಿಗೂ ಎಲ್ಲ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು. ಇವರ ಮನೆ ಮುಂದೆ ಸೇರಿ 16 ಜನರಿಗೆ ಗೇಟ್ ಕಾಯಲು ಸೆಕ್ಯೂರಿಟಿ ನೀಡಿದ್ದೀರಿ. ಭದ್ರತೆಗಾಗಿ ಪಡೆದಿರುವ ಪೊಲೀಸ್ ಸಿಬ್ಬಂದಿಯ ಹಣ ಇದುವರೆಗೂ ನೀಡಿಲ್ಲ. ಕೋಟ್ಯಂತರ ರೂ. ಬಾಕಿ ಇದೆ ಎಂದು ಆರೋಪಿಸಿದರು. ಈಗಾಗಲೇ ಗೃಹಮಂತ್ರಿಗೂ ತಿಳಿಸಿ ಮಾಹಿತಿ ಹಕ್ಕಿನಡಿ ಕೇಳಲಾಗಿದೆ ಎಂದು ಹೇಳಿದರು.
ಜೆಡಿಎಸ್ ಮುಕ್ತ ಹೊಳೆನರಸೀಪುರವನ್ನಾಗಿ ಮಾಡಿದ ನಂತರ ಜಿಲ್ಲೆಯನ್ನು ಕೂಡ ಪರಿವರ್ತಿಸುವುದೇ ನನ್ನ ಮುಖ್ಯ ಗುರಿ ಎಂದು ಇದೇ ವೇಳೆ ದೇವರಾಜೇಗೌಡ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News