×
Ad

ಸಾಹಸಿ ಮೀನುಗಾರರಿಗೆ ಬಹುಮಾನ ವಿತರಣೆ

Update: 2016-08-22 22:34 IST

  ಭಟ್ಕಳ, ಆ.22: ಆಗಸ್ಟ್.3ರಂದು ನಡೆದ ದೋಣಿ ದುರಂತದಲ್ಲಿ 9 ತಾಸುಗಳ ಕಾಲ ಸಮುದ್ರದಲ್ಲಿ ಈಜಾಡುತ್ತಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ ಬೋಟ್ ಚಾಲಕ ಗೋಪಾಲ ಮೊಗೇರ, ಸುರೇಶ್ ಬಸವ ಖಾರ್ವಿ, ನವೀನ್ ಮಾಸ್ತಿ ಖಾರ್ವಿ, ಶ್ರೀನಿವಾಸ ನಾರಾಯಣ ಖಾರ್ವಿ ಇವರಿಗೆ ಇಂಡಿಯನ್ ಕೋಸ್ಟ್ ಗಾರ್ಡ್ ವತಿಯಿಂದ 10 ಸಾವಿರ ರೂ. ಬಹುಮಾನ, ಪದಕ ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ಸ್ಟೇಷನ್ ಕಾರವಾರದ ಕಮಾಂಡೆಂಟ್ ಎಂ. ಕೆ. ಶರ್ಮಾ ಮಾತನಾಡಿ, ಮೀನುಗಾರರ ಜೀವ ರಕ್ಷಣೆ ಮಾಡಿರುವ ಮಹತ್ಕಾರ್ಯವನ್ನು ಮಾಡಿರುವ ಇವರನ್ನು ಸನ್ಮಾನಿಸಿರುವುದು ಸಂತಸ ತಂದಿದೆ. ನಾವು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಇನ್ನಷ್ಟು ಜನರಿಗೆ ಸಂಕಷ್ಟದಲ್ಲಿರುವವರಿಗೆ ಸಹಕಾರ ಮಾಡಲು ಸಹಾಯವಾಗುತ್ತದೆ. ಮೀನುಗಾರರು ಸಮುದ್ರಕ್ಕೆ ತೆರಳುವಾಗ ಕಡ್ಡಾಯವಾಗಿ ಜೀವ ರಕ್ಷಕ ಸಾಧನಗಳನ್ನು ತೆಗೆದುಕೊಂಡು ಹೋಗಬೇಕು. ನಮಗೆ ಮೀನುಗಾರಿಕೆಗಿಂತ ಜೀವ ಮುಖ್ಯವಾಗಿರುತ್ತದೆ ಎಂದರು.

ಮುಖ್ಯವಾಗಿ ಜೂನ್‌ನಿಂದ ಆಗಸ್ಟ್‌ವರೆಗೆ ಸಮುದ್ರ ತೀರ ಅಪಾಯಕಾರಿಯಾಗಿರುವುದರಿಂದ ಪ್ರತಿಯೋರ್ವರೂ ಕೂಡಾ ಕನಿಷ್ಠ ಜೀವ ರಕ್ಷಕಗಳನ್ನು ಇಟ್ಟುಕೊಂಡೇ ಸಮುದ್ರಕ್ಕೆ ತೆರಳಬೇಕು. ನಿಮ್ಮಲ್ಲಿ ಜೀವ ರಕ್ಷಕವಿದ್ದರೆ 10 ದಿನವಾದರೂ ನೀರಿನಲ್ಲಿ ಬದುಕುವ ಸಾಧ್ಯತೆ ಇದೆ ಎಂದರು. ಶಾಸಕ ಮಾಂಕಾಳ ಎಸ್. ವೈದ್ಯ ಮಾತನಾಡಿ, ಮೀನುಗಾರರ ಜೊತೆ ನಾವಿದ್ದೇವೆ, ನಮ್ಮ ಸರಕಾರವಿದೆ ಎನ್ನುವುದನ್ನು ಈಗಾಗಲೇ ನಾವು ಸಾಬೀತು ಪಡಿಸಿದ್ದೇವೆ. ನಿಮಗೆ ಸಂಕಷ್ಟದ ಸಂದಭರ್ದಲ್ಲಿ ನಾವು ಎಂದೂ ಸಹ ಬಿಟ್ಟು ಕೊಡುವುದಿಲ್ಲ ಎಂದು ಭರವಸೆ ನೀಡಿದ ಅವರು ಸಮಯ ಪ್ರಜ್ಞೆಯಿಂದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿಯೂ ತಮ್ಮ ಬೋಟ್‌ನ್ನು ಕೊಂಡು ಹೋಗಿ 7 ಜನರ ಪ್ರಾಣ ಉಳಿಸಿದ ಗೋಪಾಲ ಮೊಗೇರ ಅವರ ಕಾರ್ಯ ಶ್ಲಾಘನೀಯವಾದದ್ದು. ಅವರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಹಾಗೂ ಸಾಹಸ ತೋರಿದ ಎಲ್ಲರಿಗೂ ನಗದು, ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿರುವುದು ಸಂತಸ ತಂದಿದೆ ಎಂದರು. ಕೋಸ್ಟ್ ಗಾರ್ಡ್‌ನವರನ್ನು ತಮ್ಮ ಬೋಟನ್ನು ಇಡಲು ಸ್ಥಳಾವಕಾಶ ಕೇಳಿದರೆ ಭಟ್ಕಳದಲ್ಲಿ ಕೊಡಲು ನಾವು ಸಿದ್ಧರಿದ್ದೇವೆ ಎಂದೂ ಘೋಷಿಸಿದರು. ಮೀನುಗಾರರ ಮುಖಂಡ ವಸಂತ ಖಾರ್ವಿ ಮಾತನಾಡಿ, ಕೋಸ್ಟ್ ಗಾರ್ಡ್ ಚಿಕ್ಕ ಬೋಟನ್ನು ಮಳೆಗಾಲದ ಸಮಯದಲ್ಲಿ ಬಂದರಿನಲ್ಲಿ ಇಡುವಂತಾಗಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ್ ಸಹಾಯಕ ಕಮಾಂಡೆಂಟ್ ಅಭಿಷೇಕ್ ಗಡಿಯಾಲ್, ಪಿಆರ್‌ಒ ಎಂ.ಎಸ್.ರಾಜನ್, ಗ್ರಾಮೀಣ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಮಂಜಪ್ಪ, ಸಿ.ಎಸ್ಪಿ ಸಬ್‌ಇನ್‌ಸ್ಪೆಕ್ಟರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News