ಪ್ರವೀಣ್ ಪೂಜಾರಿ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ
ತೀರ್ಥಹಳ್ಳಿ, ಆ.22: ಬಿಜೆಪಿ ಮುಖಂಡ ಪ್ರವೀಣ್ ಪೂಜಾರಿ ಹೆಬ್ರಿಯವರನ್ನು ಅಮಾನುಷವಾಗಿ ಕೊಲೆ ಮಾಡಿರುವ ಹಿಂದೂ ಜಾಗರಣಾ ವೇದಿಕೆಯ ದುಷ್ಕೃತ್ಯ ಖಂಡಿಸಿ ಮಾಜಿ ಸಚಿವ ಹಾಗೂ ಶಾಸಕ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಾಗೂ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ತಾಲೂಕಿನ ರಂಜದಕಟ್ಟೆಯಿಂದ ತೀರ್ಥಹಳ್ಳಿಯವರೆಗೆ ಮೆರವಣಿಗೆಯ ಜಾಥಾದಲ್ಲಿ ಆಗಮಿಸಿದ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಕಿಮ್ಮನೆ ರತ್ನಾಕರ, ಬಿಜೆಪಿ ಹಾಗೂ ಆರೆಸ್ಸೆಸ್ ಪ್ರೇರಿತ ಸಂಘಟನೆಗಳಾದ ಹಿಂದೂ ಜಾಗರಣಾ ವೇದಿಕೆ, ಬಜರಂಗದಳ, ವಿಹಿಂಪ, ಗೋರಕ್ಷಣೆಯ ಹೆಸರಿನಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಅಮಾಯಕರನ್ನು ಹತ್ಯೆ ಮಾಡಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ. ಗೋವು, ತಾಯಿ, ಧರ್ಮದ ಹೆಸರಿನಲ್ಲಿ ಓಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿರುವ ಬಿಜೆಪಿ ಈ ಕ್ಷೇತ್ರದಲ್ಲಿ ತನ್ನ ಕೆಟ್ಟ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿರುವುದು ಖಂಡನೀಯ ಎಂದರು.
ದೇಶದಲ್ಲಿ ಗೋಮಾಂಸ ರ್ತು ವಹಿವಾಟಿನಿಂದ 14 ಸಾವಿರ ಕೋಟಿ ರೂ. ಆದಾಯ ಹಿಂದಿನ ಕಾಂಗ್ರೆಸ್ ಕೇಂದ್ರ ಸರಕಾರದ ಅವಧಿಯಲ್ಲಿತ್ತು. ಬಿಜೆಪಿಯ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಗೋಮಾಂಸ ರ್ತು ವಹಿವಾಟಿನ ಆದಾಯ 27 ಸಾವಿರ ಕೋಟಿ ರೂ.ಗೆ ಏರಿದೆ. ಬಿಜೆಪಿಯ ಸಂಘಟನೆಗಳಿಗೆ ಗೋಮಾಂಸ ರಫ್ತಿಗೆ ಮತ್ತು ದ್ವಿಗುಣ ಆದಾಯಕ್ಕೆ ಕಾರಣರಾದ ಪ್ರಧಾನಿ ನರೇಂದ್ರಮೋದಿ ವಿರುದ್ಧ ಏಕೆ ಹೋರಾಟ ನಡೆಸುತ್ತಿಲ್ಲ. ಬದುಕಿನ ಅನ್ನಕ್ಕಾಗಿ ಹೋರಾಡುವ ಅಮಾಯಕರ ಮೇಲೆ ಬಿಜೆಪಿ ಸಂಘಟನೆಗಳ ಪ್ರತಾಪ ಏಕೆ ಎಂದು ಪ್ರಶ್ನಿಸಿದರು.
ದೇಶವಿರೋಧಿ ಘೋಷಣೆಗಳ ಬಗ್ಗೆ ಕಳೆದ ಹತ್ತಾರು ದಿನಗಳಿಂದ ಗುಲ್ಲೆಬ್ಬಿಸಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಎಬಿವಿಪಿ ಹಾಗೂ ಇತರೆ ಸಂಘಟನೆಗಳಿಗೆ ಪ್ರವೀಣ್‌ಪೂಜಾರಿ ಹತ್ಯೆ, ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ, ಆ ಕುಟುಂಬದವರ ಗೋಳು ಕಾಣಿಸುತ್ತಿಲ್ಲವೇಕೆ? ಈ ಯಾವ ಕಾರಣಕ್ಕಾಗಿ ಈ ಪ್ರಕರಣಗಳ ಬಗ್ಗೆ ಎಬಿವಿಪಿ ವೌನ ವಹಿಸಿದೆ? ಎನ್ನುವುದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸುವುದೇ ಈ ಪ್ರತಿಭಟನೆಯ ವಿಚಾರವಾಗಿದೆ. ರಾಜಕೀಯ ಲಾಭಕ್ಕಾಗಿ ಗೋರಕ್ಷಣೆ, ಶ್ರೀರಾಮ, ದೇಶಭಕ್ತಿ ಘೋಷಣೆಗಳನ್ನು ಮುಂದಿಟ್ಟುಕೊಂಡು ಕೂಗಾಡುವ ಬಿಜೆಪಿ, ಆರೆಸ್ಸೆಸ್, ಎಬಿವಿಪಿ ಮುಂತಾದ ಸಂಘಟನೆಗಳಿಗೆ ಮನುಷ್ಯಪ್ರೇಮ, ಕಾಳಜಿಗಳು ಇಲ್ಲ ಎನ್ನುವುದು ಜಗಜ್ಜಾಹೀರಾಗಿದೆ ಎಂದು ಖಂಡನೆ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಮೃತ ಪ್ರವೀಣ್ ಪೂಜಾರಿಯವರ ತಂದೆ ಹೆಬ್ರಿಯ ವಾಸು ಪೂಜಾರಿ ಮತ್ತು ಬಂಧುಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನ. ಶ್ರೀನಿವಾಸ್, ಮಾಜಿ ಜಿಪಂ ಅಧ್ಯಕ್ಷ ಕಲಗೋಡು ರತ್ನಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಟಿ.ಎಲ್. ಸುಂದರೇಶ್, ಜಿ.ಎಸ್.ನಾರಾಯಣರಾವ್, ಡಿ.ಎಸ್.ವಿಶ್ವನಾಥ್ ಶೆಟ್ಟಿ, ಪಡುವಳ್ಳಿ ಹರ್ಷೇಂದ್ರಕುಮಾರ್, ಝಫರುಲ್ಲಾ ಖಾನ್, ಜಿಪಂ ಸದಸ್ಯರಾದ ಕಲ್ಪನಾ ಪದ್ಮನಾಭ್, ಭಾರತಿ ಬಾಳೇಹಳ್ಳಿ ಪ್ರಭಾಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಕೇಳೂರು ಮಿತ್ರ, ತಾಪಂ ಅಧ್ಯಕ್ಷೆ ನವಮಣಿ, ಪಪಂ ಸದಸ್ಯರಾದ ಗೀತಾ ರಮೇಶ್, ನಯನಾ ಜೆ. ಶೆಟ್ಟಿ, ನಾಗೇಂದ್ರ ಜೋಯ್ಸಿ, ಶಿವರಾಜಪುರ ಮಂಜುನಾಥ ಶೆಟ್ಟಿ, ಧರಣೇಶ್ ಮತ್ತಿತರರು ಉಪಸ್ಥಿತರಿದ್ದರು.