×
Ad

‘ಕೋಮುದ್ವೇಷ ಸೃಷಿ್ಟಸುವವರ ವಿರುದ್ಧ ಕಠಿಣ ಕ್ರಮ ಕೆಗೊಳಿ್ಳ: ಜಿಲ್ಲಾ ಕಾಂಗ್ರೆಸ್ ಒತ್ತಾಯ

Update: 2016-08-22 22:37 IST

ಮಡಿಕೇರಿ, ಆ.22 : ಜಿಲ್ಲೆಯಲ್ಲಿ ಕೋಮು ದ್ವೇಷವನ್ನು ಬಿತ್ತುತ್ತಿರುವ ಸಂಘಟನೆಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

ಜಿಲ್ಲೆಯಲ್ಲಿ ವಿನಾಕಾರಣ ಕೆಲವು ಸಂಘಟನೆಗಳು ಪಂಜಿನ ಮೆರವಣಿಗೆ ಸೇರಿದಂತೆ ಕೆಲವು ಜಾಥಾಗಳನ್ನು, ಬಂದ್ ನಡೆಸುವ ಮೂಲಕ ಅಶಾಂತಿಯನ್ನು ಮೂಡಿಸುತ್ತಿವೆ. ಸಾರ್ವಜನಿಕರಿಗೆ ತೊಂದರೆ ನೀಡುವ ಬಂದ್‌ಗಳನ್ನು ಮಾಡಬಾರದೆಂದು ನ್ಯಾಯಾಲಯದ ಆದೇಶವಿದ್ದರೂ ಬಂದ್‌ಗೆ ಕರೆ ನೀಡುವ ಮೂಲಕ ಜಿಲ್ಲೆಯ ಜನಜೀವನವನ್ನು ಅಸ್ತವ್ಯಸ್ತ ಗೊಳಿಸಲಾಗುತ್ತಿದೆ ಎಂದರು.

ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಬಲವಂತದಿಂದ ಪ್ರತಿಭಟನೆಗೆ ಕರೆತಂದು ವಿದ್ಯಾಭ್ಯಾಸಕ್ಕೆ ಅಡಚಣೆಯನ್ನು ಉಂಟು ಮಾಡಲಾಗುತ್ತಿದೆ. ಧಾರ್ಮಿಕ ಕೇಂದ್ರಗಳ ಮೇಲೆ ಕಲ್ಲು ಬಿಸಾಡುವ ಮೂಲಕ ಜಿಲ್ಲೆಯ ಸೌಹಾರ್ದಕ್ಕೆ ಧಕ್ಕೆ ತರಲಾಗುತ್ತಿದೆ. ಜಿಲ್ಲಾಡಳಿತದ ಅನುಮತಿ ಪಡೆಯದೆ ಬಂದ್, ಪ್ರತಿಭಟನೆ, ಚಳವಳಿಗಳನ್ನು ನಡೆಸಲಾಗುತ್ತಿದ್ದು, ಅಮಾಯಕರಿಗೆ ಅನ್ಯಾಯವಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಟಿ.ಪಿ.ರಮೇಶ್ ಈ ಸಂದರ್ಭ ಆರೋಪಿಸಿದರು.

ಜಿಲ್ಲೆಯಲ್ಲಿ ಕೋಮು ದ್ವೇಷ ಮಿತಿಮೀರುತ್ತಿದ್ದು, ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ. ಕೋಮು ದ್ವೇಷವನ್ನು ಬಿತ್ತಿ ಅಶಾಂತಿಯನ್ನು ಮೂಡಿಸುತ್ತಿರುವವರನ್ನು ಮತ್ತು ದೇಶ ದ್ರೋಹದಲ್ಲಿ ತೊಡಗಿರುವವರನ್ನು ತಕ್ಷಣ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಮೇಶ್ ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ಪಕ್ಷದ ನಗರಾಧ್ಯಕ್ಷ ಅಬ್ದುಲ್ ರಝಾಕ್ ಮತ್ತಿತರರು ಮನವಿ ಪತ್ರ ಸಲ್ಲಿಸುವ ಸಂದರ್ಭ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News