ನೂತನ ಸ್ಥಾಯಿ ಸಮಿತಿಗಳಿಗೆ ಅನುಮೋದನೆ
ಮಡಿಕೇರಿ, ಆ.22 : ಕೊಡಗು ಜಿಪಂ ಅಧ್ಯಕ್ಷರಿಂದ ರಚಿಸಲ್ಪಟ್ಟ ನೂತನ ಸ್ಥಾಯಿ ಸಮಿತಿಗಳಿಗೆ ಜಿಪಂನ ವಿಶೇಷ ಸಭೆೆಯಲ್ಲಿ ಅನುಮೋದನೆಯನ್ನು ಪಡೆದುಕೊಳ್ಳಲಾಯಿತು.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಅವರು ಹಣಕಾಸು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ, ಹಣಕಾಸು ಲೆಕ್ಕಪರಿಶೋಧನಾ ಮತ್ತು ಯೋಜನಾ ಸಮಿತಿ ಮತ್ತು ಸಾಮಾನ್ಯ ಸ್ಥಾಯಿ ಸಮಿತಿಗಳಿಗೆ ಆಯ್ಕೆ ಮಾಡಲಾದ ಸದಸ್ಯರ ವಿವರವನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆದು ಕೊಂಡರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಮ್ಮತ್ತಿ ಕ್ಷೇತ್ರದ ಎಂ.ಕೆ. ವಿಜು ಸುಬ್ರಮಣಿ, ಸದಸ್ಯರಾಗಿ ಅಪ್ಪಂಡೇರಂಡ ಭವ್ಯಾ, ಸರೋಜಮ್ಮ ಮತ್ತಿತರರು ಆಯ್ಕೆಯಾಗಿದ್ದಾರೆ. ಶಿಕ್ಷಣ,ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕದನೂರು ಕ್ಷೇತ್ರದ ಮೂಕೊಂಡ ಪಿ. ಸುಬ್ರಮಣಿ, ಸದಸ್ಯರಾಗಿ ಮುರಳಿ ಕರುಂಬಮ್ಮಯ್ಯ ಇನ್ನಿತರರು ಆಯ್ಕೆಯಾಗಿದ್ದಾರೆ. ಕೃಷಿ, ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹೆಬ್ಬಾಲೆ ಕ್ಷೇತ್ರದ ಶ್ರೀನಿವಾಸ್, ಸದಸ್ಯರಾಗಿ ಕಿರಣ್ ಕಾರ್ಯಪ್ಪ, ಶ್ರೀಜಾ ಸಾಜಿ, ಕಲಾವತಿ ಪಿ.ಬಿ. ಮತ್ತಿತರರನ್ನು ಆರಿಸಲಾಗಿದೆ.
ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಿಪಂ ಅಧ್ಯಕ್ಷ ಬಿ.ಎ. ಹರೀಶ್ ಅವರೇ ಕಾರ್ಯ ನಿರ್ವಹಿಸಲಿದ್ದು, ಸದಸ್ಯರನ್ನಾಗಿ ಅಚ್ಚಪಂಡ ಎಂ.ಮಹೇಶ್ ಗಣಪತಿ, ಮತ್ತಿತರರು ಆಯ್ಕೆಯಾಗಿದ್ದಾರೆ. ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಿಪಂ ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್, ಸದಸ್ಯರಾಗಿ ಕಿರಣ್ ಕಾರ್ಯಪ್ಪ, ಯಾಲದಾಳು ಪದ್ಮಾವತಿ ಇನ್ನಿತರರು ಆಯ್ಕೆಯಾಗಿದ್ದಾರೆ.
ಜಿಪಂ ನೂತನ ಸ್ಥಾಯಿ ಸಮಿತಿಗಳ ಸಭೆೆಯನ್ನು ಮುಂದಿನ 15 ದಿನಗಳ ಒಳಗಾಗಿ ನಡೆಸಲಾಗುವುದೆಂದು ಜಿಪಂ ಅಧ್ಯಕ್ಷ ಹರೀಶ್ ಇದೇ ಸಂದರ್ಭ ತಿಳಿಸಿದರು.
ಕಾಂಗ್ರೆಸ್ ಅಸಮಾಧಾನ: ವಿಶೇಷ ಸಭೆಯ ಆರಂಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ಬಾನಂಡ ಪ್ರತ್ಯು ಮಾತನಾಡಿ, ಈಗಾಗಲೇ ಸ್ಥಾಯಿ ಸಮಿತಿ ರಚನೆಗೆ ಅಧ್ಯಕ್ಷರಿಗೆ ಅಧಿಕಾರವನ್ನು ನೀಡಲಾಗಿದೆ. ಇದೀಗ ಮತ್ತೊಮ್ಮೆ ಸ್ಥಾಯಿ ಸಮಿತಿ ರಚನೆ ಮತ್ತು ಅನುಮೋದನೆಗಾಗಿ ಸಭೆ ಕರೆದಿರುವ ಔಚಿತ್ಯವೇನು. ಕಳೆದ ಐದು ತಿಂಗಳಿನಿಂದ ಸಾಮಾನ್ಯ ಸಭೆಯನ್ನು ಕರೆದಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಕಷ್ಟಕರವಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು. ಇದರ ಬದಲಾಗಿ ಸಾಮಾನ್ಯ ಸಭೆಯನ್ನೇ ಕರೆಯಬಹುದಿತ್ತೆಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಚಾರುಲತಾ ಸೋಮಲ್, ಪಂಚಾಯತ್ ರಾಜ್ ನಿಯಮಗಳ ಅನ್ವಯ ಜಿಪಂ ಸರ್ವ ಸದಸ್ಯರ ಸಭೆಯಲ್ಲಿ ಸ್ಥಾಯಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಿ ಅನುಮೋದನೆ ಪಡೆಯಬೇಕು. ಬಳಿಕ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಯೊಂದಿಗೆ ಸ್ಥಾಯಿ ಸಮಿತಿ ಸಭೆ ನಡೆಸುವುದು ಅವಶ್ಯವೆಂದು ಸ್ಪಷ್ಟಪಡಿಸಿದರು.
ಸಭೆೆಯಲ್ಲಿ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಜು ಸುಬ್ರಮಣಿ, ಶಶಿ ಸುಬ್ರಮಣಿ ಮತ್ತು ಶ್ರೀನಿವಾಸ್ ಅವರು ಮಾತನಾಡಿದರು.