ಜನೋತ್ಸವಕ್ಕೆ 1.50 ಕೋಟಿ ರೂ. ಕ್ರಿಯಾ ಯೋಜನೆ ಮಂಡನೆ
ಮಡಿಕೇರಿ ಆ.22 : ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾ ಜನೋತ್ಸವವನ್ನು ಅರ್ಥಪೂರ್ಣವಾಗಿ ಮತ್ತು ಅತ್ಯಾಕರ್ಷಕವಾಗಿ ಆಯೋಜಿಸಲು ದಸರಾ ಸಮಿತಿ ಅಧ್ಯಕ್ಷೆ ಶ್ರೀಮತಿ ಬಂಗೇರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಸಮಿತಿಯ ಪ್ರಥಮ ಸಭೆಯಲ್ಲಿ 2016-17ನೆ ಸಾಲಿನ ಜನೋತ್ಸವಕ್ಕೆ ಅಂದಾಜು 1.50 ಕೋಟಿ ರೂ. ಕ್ರಿಯಾ ಯೋಜನೆಯನ್ನು ಮಂಡಿಸಲಾಗಿದೆ.
ಕಾವೇರಿ ಕಲಾಕ್ಷೇತ್ರದಲ್ಲಿ ಸಂಜೆ ನಡೆದ ಸಭೆಯಲ್ಲಿ ದಸರಾ ಸಮಿತಿಯ ಖಜಾಂಚಿ ಅನಿತಾ ಪೂವಯ್ಯ, ಕಳೆದ ಸಾಲಿನ ದಸರಾ ಉತ್ಸವದ ಖರ್ಚು ವೆಚ್ಚದ ವಿವರವನ್ನು ಸಭೆಗೆ ನೀಡಿದರು. ಕಳೆದ ಬಾರಿ ದಸರಾ ಉತ್ಸವದ ಆಯೋಜನೆಗೆ 75.36 ಲಕ್ಷ ರೂ. ಖರ್ಚಾಗಿದ್ದು, 2.90 ಲಕ್ಷ ರೂ. ಉಳಿತಾಯವಾಗಿರುವುದಾಗಿ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ದಸರಾ ಉತ್ಸವದ ಒಂಬತ್ತು ದಿನಗಳ ಕಾರ್ಯಕ್ರಮಗಳನ್ನು ಹಿಂದಿನ ಸಾಲಿನಂತೆಯೆ ನಡೆಸಲು ತಗಲುವ ಖರ್ಚು ವೆಚ್ಚಗಳ ಕುರಿತ ಮಾಹಿತಿಯನ್ನು ನೀಡಿದರು.
ನಗರಸಭಾ ಸದಸ್ಯರು ಹಾಗೂ ದಂಡಿನ ಮಾರಿಯಮ್ಮ ದಸರಾ ಮಂಟಪದ ಪದಾಧಿಕಾರಿ ಕೆ. ಎಸ್. ರಮೇಶ್ ಮಾತನಾಡಿ, ಸರಕಾರದಿಂದ ಲಭ್ಯವಾಗುವ ನೆರವನ್ನು ಬಳಸಿ ದಸರಾ ಕಾರ್ಯಕ್ರಮಗಳನ್ನು ನಡೆಸುವುದು ಸೂಕ್ತ ವೆಂದರು. ಕಳೆದ ಬಾರಿ ದಸರಾ ಸಮಿತಿ ಜನರ ಬಳಿಗೆ ದೇಣಿಗೆಗೆಂದು ತೆರಳಿದ್ದರಿಂದ ಮಂಟಪ ಸಮಿತಿಗಳಿಗೆ ನಿರೀಕ್ಷಿತ ನೆರವು ಸಾರ್ವಜನಿಕ ವಲಯದಿಂದ ದೊರಕದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಮಡಿಕೇರಿ ದಸರಾ ದಶ ಮಂಟಪ ಸಮಿತಿ ಅಧ್ಯಕ್ಷ ಬಿ.ಎಂ. ರಾಜೇಶ್ ಮಾತನಾಡಿ, ಈ ಬಾರಿಯ ದಸರಾ ಜನೋತ್ಸವಕ್ಕೆ ದಶ ಮಂಟಪಗಳಿಗೆ ಆಯವ್ಯಯದಲ್ಲಿ ಸೂಚಿಸಿರುವಂತೆ 50 ಲಕ್ಷ ರೂ. ಒದಗಿಸಿ ಸಹಕರಿಸುವಂತೆ ಮನವಿ ಮಾಡಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಕಳೆದ ಸಾಲಿನಲ್ಲಿ ಸರಕಾರದಿಂದ ಅನುದಾನ ಬರಲು ವಿಳಂಬವಾದ ಕಾರಣ ಕೇವಲ 14 ದಿನಗಳಲ್ಲಿ ದಸರಾ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು. ಆದರೂ ಸರ್ವರ ಸಹಕಾರದಿಂದ ಉತ್ಸವವನ್ನು ಯಶಸ್ವಿಯಾಗಿ ಆಚರಿಸಿದ್ದು, ಈ ಬಾರಿಯೂ ಅದೇ ರೀತಿಯ ಸಹಕಾರಕ್ಕೆ ಮನವಿ ಮಾಡಿದರು. ಗೌರವಾಧ್ಯಕ್ಷ ಎಂ.ಬಿ. ದೇವಯ್ಯ, ಮಡಿಕೇರಿ ದಸರಾ ಜನೋತ್ಸವ ತನ್ನ ಹಿಂದಿನ ಮೆರಗನ್ನು ಹಾಗೂ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಜನರಿಂದ ಜನರಿಗಾಗಿ ನಡೆಯಬೇಕಾದ ಜನೋತ್ಸವ ಇಂದು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಬಂಗೇರ ಮಾತನಾಡಿ, ದಸರಾ ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ವೇದಿಕೆಯಲ್ಲಿ ದಸರಾ ಸಮಿತಿಯ ಪದಾಧಿಕಾರಿಗಳು, ನಗರಸಭಾ ಸದಸ್ಯರು, ದಸರಾ ಸಮಿತಿಯ ಉಪಸಮಿತಿಗಳ ಅಧ್ಯಕ್ಷರು, ದಶ ಮಂಟಪ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.