×
Ad

ಅನೈತಿಕ ಚಟುವಟಿಕೆಯ ತಾಣವಾಗಿರುವ ಶಿವಮೊಗ್ಗ ಕೆಎಚ್‌ಬಿ ಮನೆಗಳು!

Update: 2016-08-22 22:52 IST

ಶಿವಮೊಗ್ಗ, ಆ. 22: ನಗರದ ಹೊರವಲಯ ಸೋಮಿಕೊಪ್ಪಬಡಾವಣೆಯ ಶಿವಮೊಗ್ಗ - ರಾಮನಗರ ರಸ್ತೆಯಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿರ್ಮಿಸಲಾಗಿರುವ ಮನೆಗಳು ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಯ ತಾಣವಾಗಿ ಪರಿವರ್ತನೆಯಾಗಿದೆ.

ರಾತ್ರಿ ವೇಳೆ ಈ ಮನೆಗಳಲ್ಲಿ ನಾನಾ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಕೆಲ ಮನೆಗಳ ಬಾಗಿಲುಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕಿಟಕಿ ಗಾಜುಗಳನ್ನು ಪುಡಿಗೈದಿದ್ದಾರೆ. ಮದ್ಯ ವ್ಯಸನಿಗಳು, ಜೂಜುಕೋರರು, ಕಳ್ಳಕಾಕರ ಹಾವಳಿ ವಿಪರೀತವಾಗಿದೆ. ಇದರಿಂದ ಬಡಾವಣೆಯ ನಿವಾಸಿಗಳು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಿಲ್ಲದಂತಾಗಿದೆ. ಹೆಣ್ಣು ಮಕ್ಕಳು ಅಸುರಕ್ಷತೆಯಿಂದ ಜೀವನ ಸಾಗಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ನಿರ್ಲಕ್ಷ್ಯ:

ಬಡಾವಣೆಯಲ್ಲಿ ಕೆ.ಎಚ್.ಬಿ. ವತಿಯಿಂದ ಇಡಬ್ಲ್ಯೂಎಸ್, ಎಲ್‌ಐಜಿ ಹಾಗೂ ಎಂಐಜಿ ವಿಸ್ತೀರ್ಣದ ಸುಮಾರು 40 ಮನೆಗಳ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಈಗಾಗಲೇ ಹಲವು ಮನೆಗಳನ್ನು ನಾಗರಿಕರಿಗೆ ಹಂಚಿಕೆ ಮಾಡಲಾಗಿದೆ. ಹಲವು ಮನೆಗಳು ಇನ್ನೂ ಕೆ.ಎಚ್.ಬಿ.ಯ ಅಧೀನದಲ್ಲಿಯೇ ಇವೆ. ಇಲ್ಲಿಯವರೆಗೂ ಈ ಮನೆಗಳ ಹಂಚಿಕೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಪ್ರಸ್ತುತ ಈ ಮನೆಗಳನ್ನು ಕೆಲವರು ಅಕ್ರಮ ಚಟುವಟಿಕೆಗೆ ಬಳಕೆ ಮಾಡುತ್ತಿದ್ದಾರೆ ಎಂದು ನಿವಾಸಿಗಳು ಹೇಳುತ್ತಾರೆ. ಕಳೆದ ಐದಾರು ವರ್ಷಗಳ ಹಿಂದೆ ಕೆ.ಎಚ್.ಬಿ.ಯಿಂದ ರಿಯಾಯಿತಿ ದರದಲ್ಲಿ ಮನೆ ಪಡೆದುಕೊಂಡಿದ್ದ ಹಲವು ಫಲಾನು ಭವಿಗಳು ಮನೆಗಳಲ್ಲಿ ವಾಸಿಸುತ್ತಿಲ್ಲ. ಈ ಮನೆಗಳ ಸುತ್ತಮುತ್ತಲು ಅಸ್ವಚ್ಛತೆಯ ವಾತಾವರಣವಿದ್ದು, ಇದರಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಇಂತಹ ಫಲಾನುಭವಿಗಳಿಗೆ ನೋಟಿಸ್ ಜಾರಿಗೊಳಿಸಿ, ಮನೆ ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಬೇಕು. ಇಲ್ಲದಿದ್ದರೆ ಅಂತಹವರಿಗೆ ಮನೆಯ ಅವಶ್ಯಕತೆಯಿಲ್ಲವೆಂದು ತಿಳಿದು ಅರ್ಹ ವಸತಿರಹಿತರಿಗೆ ಮನೆಗಳ ಮರು ಹಂಚಿಕೆ ಮಾಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಬಡಾವಣೆಯಲ್ಲಿ ಖಾಲಿಯಿರುವ ಮನೆಗಳ ಹಂಚಿಕೆ ಮಾಡುವಂತೆ ಈಗಾಗಲೇ ಬೆಂಗಳೂರು ಕಚೇರಿಗೆ ವರದಿ ಕಳುಹಿಸಿ ಕೊಡಲಾಗಿದೆ ಎಂದು ಸ್ಥಳೀಯ ಕೆ.ಎಚ್.ಬಿ. ಕಚೇರಿಯವರು ಹೇಳುತ್ತಾರೆ. ಬೆಂಗಳೂರು ಕಚೇರಿಯಲ್ಲಿರುವ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯ ಧೋರಣೆಯಿಂದ ಈವರೆಗೂ ಮನೆಗಳ ಹಂಚಿಕೆ ಪ್ರಕ್ರಿಯೆ ಆರಂಭವಾಗಿಲ್ಲ. ಅಲ್ಲದೆ, ಸ್ವಚ್ಛತಾ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಸತಿ ಖಾತೆ ನಿರ್ವಹಣೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಕ್ಷಣವೇ ಬೆಂಗಳೂರಿನ ಕೆ.ಎಚ್.ಬಿ. ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಪಾಳು ಬಿದ್ದು, ಅನೈತಿಕ ಚಟುವಟಿಕೆಯ ತಾಣವಾಗುತ್ತಿರುವ ಕೆ.ಎಚ್.ಬಿ. ಮನೆಗಳಿಗೆ ಸೂಕ್ತ ಕಾರ್ಯಕಲ್ಪ ಕಲ್ಪಿಸುವ ವ್ಯವಸ್ಥೆ ಮಾಡಬೇಕು. ಕಳ್ಳಕಾಕರ ಹಾವಳಿ ನಿಯಂತ್ರಣಕ್ಕೆ ಪೊಲೀಸ್ ಗಸ್ತು ವ್ಯವಸ್ಥೆ ನಡೆಸುವ ಜೊತೆಗೆ, ಬಡಾವಣೆಯಲ್ಲಿ ಸಿ. ಸಿ. ಕ್ಯಾಮರಾ ಅಳವಡಿಸಬೇಕು ಎಂದು ಆಗ್ರಹಿಸಿರುವ ಸ್ಥಳೀಯರು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಗಸ್ತು ವ್ಯವಸ್ಥೆಯೂ ಇಲ್ಲ...!

ಸೋಮಿನಕೊಪ್ಪ, ಜೆ.ಎಚ್. ಪಟೇಲ್ ಬಡಾವಣೆ, ಕೆಎಚ್‌ಬಿ ಪ್ರೆಸ್ ಕಾಲೋನಿ, ಗೆಜ್ಜೇನಹಳ್ಳಿ, ಕೋಟೆಗಂಗೂರು, ಮೋಜಪ್ಪನ ಹೊಸೂರು ಗ್ರಾಮ, ಸಹ್ಯಾದ್ರಿ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆ-ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಕಳ್ಳಕಾಕರ ಹಾವಳಿ ವಿಪರೀತವಾಗುತ್ತಿದೆ. ರಾತ್ರಿಯ ವೇಳೆ ಪೊಲೀಸ್ ಗಸ್ತು ವ್ಯವಸ್ಥೆ ಕಡಿಮೆಯಿದೆ. ಈ ಹಿನ್ನೆಲೆಯಲ್ಲಿ ಈ ಬಡಾವಣೆಗಳಲ್ಲಿ ರಾತ್ರಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಹೆಚ್ಚಿಸಬೇಕು. ನಾಗರಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸೋಮಿನಕೊಪ್ಪಬಡಾವಣೆಯಲ್ಲಿ ಪೊಲೀಸ್ ಚೌಕಿ ಸ್ಥಾಪಿಸಬೇಕು. ಮುಖ್ಯ ರಸ್ತೆಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು ಎಂದು ಸ್ಥಳೀಯ ಬಡಾವಣೆಗಳ ನಿವಾಸಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನರ್ ಅವರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News